ಹೈದರಾಬಾದ್:
ಬ್ಯಾಡ್ಮಿಂಟನ್ ಸ್ಟಾರ್, ಒಲಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಪರಸ್ಪರ ಬೇರ್ಪಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 2018ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಇದೀಗ 7 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವ ನಿರ್ಧಾರವನ್ನು ಇವರು ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ಎದುರಾಗಿದೆ.
ನೆಹ್ವಾಲ್ ಇನ್ಸ್ಟಾಗ್ರಾಮ್ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಕಶ್ಯಪ್ ಜೊತೆಗಿನ 7 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ‘ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು, ನಮ್ಮಿಬ್ಬರಿಗಾಗಿ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞನಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೈನಾ ಹೇಳಿದ್ದಾರೆ. ವಿಚ್ಛೇದನದ ಕುರಿತು ಕಶ್ಯಪ್ ಈ ವರೆಗೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ.
ವೃತ್ತಿ ಜೀವನದ ಆರಂಭದಿಂದಲೂ ಇಬ್ಬರೂ ಒಟ್ಟಿಗೆ ಬೆಳೆದಿದ್ದರು. ನೆಹ್ವಾಲ್ ಒಲಿಂಪಿಕ್ಸ್ ಕಂಚಿನ ಪದಕ ಮತ್ತು ವಿಶ್ವದ ನಂ. 1 ಶ್ರೇಯಾಂಕ ಪಡೆದಿದ್ದರೆ ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ ಕಶ್ಯಪ್ ಈಗ ತರಬೇತಿ ನೀಡುತ್ತಿದ್ದಾರೆ. 2019ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಕಶ್ಯಪ್ ಕೋಚ್ ಆಗಿದ್ದರು. ವಿಚ್ಛೇದನಕ್ಕೆ ಕಾರಣವೇನು ಎಂದು ಈ ಜೋಡಿ ಎಲ್ಲಿಯೂ ಹೇಳಿಲ್ಲ.
ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2024 ರಲ್ಲಿ, ಸೈನಾ ತಾವು ಸಂಧಿವಾತದಿಂದ ಬಳಲುತ್ತಿದ್ದು ತಮ್ಮ ಬ್ಯಾಡ್ಮಿಂಟನ್ ಭವಿಷ್ಯದ ಬಗ್ಗೆ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದರು.
