ನವದೆಹಲಿ:
ಪರೀಕ್ಷೆಯ ಸಮಯದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಋತುಚಕ್ರದ ಸವಾಲುಗಳನ್ನು ಗುರುತಿಸಿ, ಕೇಂದ್ರ ಸರ್ಕಾರ ಗುರುವಾರ ದೇಶದ ಎಲ್ಲಾ ಶಾಲೆಗಳಿಗೆ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷಾ ಕೇಂದ್ರಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವಂತೆ ಸಲಹೆ ನೀಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸತತ ಎರಡನೇ ಅವಧಿಗೆ ಶಿಕ್ಷಣ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. 10ನೇ ಮತ್ತು 12ನೇ ತರಗಿತ ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರ ಆರೋಗ್ಯ, ಘನತೆ ಮತ್ತು ಶೈಕ್ಷಣಿಕ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಈ ಘೋಷಣೆ ಮಾಡಲಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಋತುಮತಿಯಾಗುವ ಹೆಣ್ಣುಮಕ್ಕಳಿಗೆ ಬಾತ್ ರೂಂ ಬ್ರೇಕ್ ನೀಡಬೇಕು ಎಂದು ಘೋಷಿಸಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಮಾತ್ರವಲ್ಲದೆ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳಿಗೂ ಈ ಸಂಬಂಧ ನಿರ್ದೇಶನಗಳನ್ನು ನೀಡಲಾಗಿದೆ.
ಎಲ್ಲಾ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷಾ ಕೇಂದ್ರಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ಗಳು ಸುಲಭವಾಗಿ ಲಭ್ಯವಿರಬೇಕು. ಅಗತ್ಯವಿದ್ದರೆ ಪರೀಕ್ಷೆಯ ಸಮಯದಲ್ಲಿ ಬಾಲಕಿಯರಿಗೆ ಅಗತ್ಯವಾದ ನೈರ್ಮಲ್ಯ ಉತ್ಪನ್ನಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮುಟ್ಟಿನ ನೈರ್ಮಲ್ಯದ ಅಗತ್ಯತೆಗಳ ವಿಚಾರದಲ್ಲಿ ಹೆಣ್ಣುಮಕ್ಕಳನ್ನು ಘನತೆಯಿಂದ ನಡೆಸಿಕೊಳ್ಳುವುದು ಮತ್ತು ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಿ, ಶೈಕ್ಷಣಿಕ ಗುರಿ ಸಾಧಿಸಲು ಅವರಿಗೆ ನೆರವಾಗುವುದರ ಮಹತ್ವವನ್ನು ಕೇಂದ್ರ ಶಿಕ್ಷಣ ಸಚಿವಾಲಯ ಒತ್ತಿ ಹೇಳಿದೆ.