ತಮ್ಮ ಸ್ಥಾನಕ್ಕೆ ಮತ್ತೆ ಮರಳಿದ ಸ್ಯಾಮ್‌ ಪಿತ್ರೋಡಾ

ವದೆಹಲಿ:

    ಕಳೆದ ಲೋಕಸಭಾ ಚುನಾವಣೆ  ವೇಳೆ ಭಾರೀ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸ್ಯಾಮ್ ಪಿತ್ರೋಡಾ  ಪುನಃ ಅದೇ ಸ್ಥಾನಕ್ಕೆ ಮರಳಿದ್ದಾರೆ.

   ಸ್ಯಾಮ್ ಪಿತ್ರೋಡಾ ಅವರನ್ನು ಮತ್ತೊಮ್ಮೆ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ. 

    ಲೋಕಸಭೆ ಚುನಾವಣೆಯ ವೇಳೆ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಸ್ಯಾಮ್ ಪಿತ್ರೋಡಾ ವಿಚಾರವನ್ನು ವ್ಯವಸ್ಥಿತವಾಗಿ ಮಾಡಿದೆ. ಉತ್ತರ ಭಾರತ, ದಕ್ಷಿಣ ಭಾರತ ಎಂದು ಒಡೆಯಲು ಕಾಂಗ್ರೆಸ್ ಉರುಳಿಸಿದ ದಾಳ ಸ್ಯಾಮ್ ಪಿತ್ರೋಡಾ. ಆದರೆ ತಿರುಗುಬಾಣವಾದಾಗ ತಕ್ಷಣವೇ ರಾಜೀನಾಮೆಯ ಪ್ರಹಸನ ಆಡಿದೆ. ಆದರೆ ಇದು ನಿಜವಾದ ರಾಜೀನಾಮೆ ಇಲ್ಲ. ಪಕ್ಷದಿಂದ ಕೆಲ ದಿನಗಳ ಕಾಲ ಹೊರಗಿಡಲಾಗಿದೆ. ಅಷ್ಟೇ ವೇಗದಲ್ಲಿ ಸ್ಯಾಮ್ ಪಿತ್ರೋಡಾ ಮತ್ತೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೋದಿ ಹೇಳಿದ್ದರು. ಇದೀಗ ಅವರು ಹೇಳಿದಂತೆಯೇ ಕಾಂಗ್ರೆಸ್‌ ಪುನಃ ಸ್ಯಾಮ್ ಪಿತ್ರೋಡಾರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದೆ.

    ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ನೀಡಿದ ಎರಡು ಹೇಳಿಕೆಗಳು ಚುನಾವಣಾ ಸಮಯದಲ್ಲಿ ರಾಜಕೀಯ ವಿವಾದವನ್ನು ಸೃಷ್ಟಿಸಿತ್ತು. ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದಲ್ಲದೇ ಆಡಳಿತ ಪಕ್ಷ ಬಿಜೆಪಿ ಪಿತ್ರೋಡಾ ಹೇಳಿಕೆಯನ್ನೇ ದಾಳವನ್ನಾಗಿ ಉರುಳಿಸಿತ್ತು. ನಂತರ ಸ್ಯಾಮ್ ಪಿತ್ರೋಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಸ್ಯಾಮ್ ಪಿತ್ರೋಡಾ ಅವರು ಈ ಹಿಂದಿನ ತನ್ನ ಹೇಳಿಕೆಯಲ್ಲಿ, ‘ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ, ಯಾರಾದರೂ $100 ಮಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ ಮತ್ತು ಅವನು ಸತ್ತಾಗ, ಅವನು ಅದರಲ್ಲಿ 45% ಮಾತ್ರ ತನ್ನ ಮಕ್ಕಳಿಗೆ ವರ್ಗಾಯಿಸಬಹುದು, ಆದರೆ ಉಳಿದ 55% ಆಸ್ತಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ ಮತ್ತು ಈಗ ನೀವು ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಟ್ಟುಬಿಡಬೇಕು ಎಂಬ ಕಾನೂನು ಅದು, ಇದನ್ನು ನಾನು ಸೂಕ್ತವೆಂದು ಭಾವಿಸುತ್ತೇನೆ ಎಂದು ಹೇಳಿದ್ದರು.

    ಪಿತ್ರಾರ್ಜಿತ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಸ್ಯಾಮ್ ಪಿತ್ರೋಡಾ ನೀಡಿದ್ದ ಈ ಹೇಳಿಕೆ ವಿರುದ್ಧ ಪ್ರಧಾನಮಂತ್ರಿ ಮೋದಿಯಿಂದ ಹಿಡಿದುಬಿಜೆಪಿ ನಾಯಕರೆಲ್ಲ ತೀವ್ರವಾಗಿ ಟೀಕಿಸಿದ್ದರು. ಚುನಾವಣೆ ವೇಳೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ”ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಕಾಂಗ್ರೆಸ್ ರಾಜಮನೆತನದ ಯುವರಾಜನ ಸಲಹೆಗಾರ ಹಿಂದೆ ಹೇಳಿದ್ದರು. ಈಗ ಅವರು ಮುಂದೆ ಹೋಗಿದ್ದಾರೆ. ಈಗ ಕಾಂಗ್ರೆಸ್ ಹೇಳುತ್ತಿದೆ. ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುತ್ತೇವೆ, ನಿಮ್ಮ ಪೋಷಕರಿಂದ ನೀವು ಕೂಡಿಟ್ಟ ಆಸ್ತಿಯನ್ನು ನಿಮ್ಮ ಮಕ್ಕಳು ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ನಿಮ್ಮ ಹೆಣ್ಮಕ್ಕಳ ತಾಳಿಯನ್ನೂ ಕಿತ್ತುಕೊಳ್ಳುತ್ತದೆ ಎಂದು ಆಕ್ರೋಶಕಾರಿ ಹೇಳಿಕೆ ನೀಡಿದ್ದರು.

    ಒಟ್ಟಾರೆ ಕಳೆದ ಲೋಕಸಭಾ ಚುನಾವಣೆ ವೇಳೆ ಭಾರೀ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸ್ಯಾಮ್ ಪಿತ್ರೋಡಾ ಪುನಃ ಅದೇ ಸ್ಥಾನಕ್ಕೆ ಮರಳಿದ್ದು, ಆ ಮೂಲಕ ಮೋದಿ ನುಡಿದ ಭವಿಷ್ಯ ನಿಜವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ