ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ : ಡಿಕೆ ಶಿವಕುಮಾರ್

ಬೆಂಗಳೂರು :

    ಸದ್ಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮೋಹನ್‌ಲಾಲ್‌ ಅಭಿನಯದ ‘ವೃಷಭ’ ಸಿನಿಮಾ ಡಿಸೆಂಬರ್ 25ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ತಂದೆ-ಮಗನ ನಡುವಿನ ಬಾಂಧವ್ಯದ ಎಮೋಷನಲ್ ಕಥಾಹಂದರ ಹೊಂದಿರುವ ಈ ಸಿನಿಮಾ, ಭವ್ಯತೆ ಮತ್ತು ಸಾಹಸ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈ ಚಿತ್ರದ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರಕ್ಕೆ ಶುಭ ಕೋರಿದ್ದಾರೆ. 

    ಮೋಹನ್‌ಲಾಲ್‌ ಅವರ ವೃಷಭ ಸಿನಿಮಾದಲ್ಲಿ ಇಂದ್ರಜಿತ್‌ ಲಂಕೇಶ್‌ ಅವರ ಪುತ್ರ ಸಮರ್ಜಿತ್‌ ಲಂಕೇಶ್‌ ಪ್ರಮುಖ ಪಾತ್ರ ಮಾಡಿದ್ದಾರೆ. “ಪಿ ಲಂಕೇಶ್ ಅವರ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್, ಖ್ಯಾತ ನಟ ಮೋಹನ್ ಲಾಲ್ ಅವರೊಂದಿಗೆ ನಟಿಸಿರುವ ʻವೃಷಭʼ ಚಿತ್ರ ಡಿಸೆಂಬರ್ 25ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ವೃಷಭ ಎಂದರೆ ಗೂಳಿ.. ಇಡೀ ದೇಶದಾದ್ಯಂತ ʻವೃಷಭʼ ಚಿತ್ರ ಗೂಳಿಯಂತೆ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೆ ಒಳ್ಳೆಯದಾಗಲಿ. ಈಚೆಗೆ ನಾನು ಮುಂಬೈಗೆ ಹೋಗಿದ್ದಾಗ ಬಾಲಿವುಡ್ ಮಂದಿ ಕೂಡ ಕನ್ನಡ ಚಿತ್ರಗಳ ಬಗ್ಗೆ ಆಡಿದ ಉತ್ತಮ ಮಾತುಗಳನ್ನು ಕೇಳಿ ಸಂತೋಷವಾಯಿತು” ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಈ ಸಂದರ್ಭದಲ್ಲಿ ಹೇಳಿದರು. 

   ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಯುವ ಪ್ರತಿಭೆ ಸಮರ್ಜಿತ್ ಲಂಕೇಶ್ ಜೊತೆಗೆ ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ನೇಹಾ ಸಕ್ಸೇನಾ, ಗರುಡ ರಾಮ್, ವಿನಯ್ ವರ್ಮಾ, ಆಲಿ, ಅಯ್ಯಪ್ಪ ಪಿ. ಶರ್ಮಾ ಮತ್ತು ಕಿಶೋರ್ ಅವರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. 

   ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕನೆಕ್ಟ್ ಮೀಡಿಯಾ ಪ್ರೆಸೆಂಟ್ಸ್ ಅಡಿಯಲ್ಲಿ, ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್ ಸಹಯೋಗದೊಂದಿಗೆ ಈ ಸಿನಿಮಾ ಮೂಡಿಬರುತ್ತಿದೆ. ಶೋಭಾ ಕಪೂರ್, ಏಕ್ತಾ ಆರ್. ಕಪೂರ್, ಸಿ.ಕೆ. ಪದ್ಮಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್. ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಮಲ್ ಲಹೋಟಿ ಅವರು ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 

   ಸ್ಯಾಂಡಲ್‌ವುಡ್‌ನಲ್ಲಿ ಅಧ್ಯಕ್ಷ, ರನ್ನ, ವಿಕ್ಟರಿ, ಮುಕುಂದ ಮುರಾರಿ, ಟೈಗರ್‌ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ನಂದಕಿಶೋರ್‌ ಅವರು ವೃಷಭ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ‘ವೃಷಭ’ ಚಿತ್ರವನ್ನು ಏಕಕಾಲದಲ್ಲಿ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

   ಈ ಚಿತ್ರಕ್ಕೆ ತಮಿಳಿನ ಸ್ಯಾಮ್ ಸಿ.ಎಸ್. ಸಂಗೀತ ನೀಡಿದ್ದು, ಧ್ವನಿ ವಿನ್ಯಾಸವನ್ನು ಆಸ್ಕರ್ ಪ್ರಶಸ್ತಿ ವಿಜೇತ ರೇಸುಲ್ ಪೂಕುಟ್ಟಿ ಮಾಡಿದ್ದಾರೆ. ಸಂಭಾಷಣೆಯ ಹೊಣೆ ಎಸ್ ಆರ್ ಕೆ, ಜನಾರ್ದನ್ ಮಹರ್ಷಿ ಮತ್ತು ಕಾರ್ತಿಕ್ ಅವರದ್ದು. ಸಾಹಸ ನಿರ್ದೇಶನವನ್ನು ಪೀಟರ್ ಹೇನ್, ಸ್ಟಂಟ್ ಸಿಲ್ವಾ, ಗಣೇಶ್ ಮತ್ತು ನಿಖಿಲ್ ಅವರುಗಳು ಮಾಡಿದ್ದಾರೆ.

Recent Articles

spot_img

Related Stories

Share via
Copy link