ನವದೆಹಲಿ:
ದೇಶದ ಆರ್ಥಿಕ ವ್ಯವಹಾರಗಳ ಆಧಾರ ಸ್ತಂಭದಂತಿರುವ ಎಂಎಸ್ಎಂಇ ಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ. ದೇಶದಲ್ಲಿರುವ 37% ಎಂಎಸ್ಎಂಇಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹೆಚ್ಚುವರಿ ಹೂಡಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಬಂಡವಾಳಗಳು ಬಹುತೇಕ ವೆಚ್ಚದ ಉದ್ದೇಶಕ್ಕಾಗಿ ವಿನಿಯೋಗವಾಗುತ್ತಿದೆ. ಈ ವೆಚ್ಚವನ್ನು ನಿಯಂತ್ರಿಸಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ಹೂಡಿಕೆಮಾಡಲು ಯೋಜನೆ ರೂಪಿಸಿರುವುದಾಗಿ ಸಿಡ್ಬಿ ವರದಿಯಲ್ಲಿ ತಿಳಿಸಿದೆ. ಹಾಗಾದರೆ ಯಾವೆಲ್ಲ ಹೊಸ ಕ್ರಮಗಳು ಎಂಎಸ್ಎಂಇ ಅಡಿಯಲ್ಲಿ ಜಾರಿಯಾಗಲಿದೆ? ಸಿಡ್ಬಿ ವರದಿಯಲ್ಲಿ ಯಾವೆಲ್ಲ ಅಂಶ ಸೇರ್ಪಡೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ದೇಶದ ಅರ್ಥವ್ಯವಸ್ಥೆಯಲ್ಲಿ ಎಂಎಸ್ಎಂಇ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಎಂಎಸ್ಎಂಇ ಎಂದರೆ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವ್ಯವಹಾರ ಉದ್ದಿಮೆಯಾಗಿದೆ. ಎಂಎಸ್ಎಂಇ ನಲ್ಲಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಖರೀದಿಸಲು ಅಡಮಾನ ರಹಿತ ಅವಧಿ ಸಾಲ ಸೌಲಭ್ಯ ಲಭ್ಯ ಇರಲಿದೆ. ಅದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯಗಳು ಎಂಎಸ್ಎಂಇ ಯಿಂದ ಆಗುತ್ತಿದೆ. ಇಂತಹ ಉದ್ದಿಮೆ ವ್ಯವಹಾರಗಳು ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಮೂಲಕ ನಡೆಯಲಿದೆ. ಅಂತವುಗಳಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಆದ ಸಿಡ್ ಬಿ ಕೂಡ ಒಂದಾಗಿದೆ. ಜಾಗತಿಕ ಆರ್ಥಿಕ ಆಘಾತಗಳು ಪ್ರತಿಕೂಲ ಪರಿಸ್ಥಿತಿ ನಿಭಾಯಿಸಲು ಆರ್ಥಿಕತೆಗೆ ಭದ್ರವಾಗಿ ಎಂಎಸ್ಎಂಇ ಎನ್ನುವುದು ಅವಿರತವಾಗಿ ಕಾರ್ಯ ನಿರ್ವಹಿಸುತ್ತಲೇ ಇದೆ ಎನ್ನಬಹುದು.
ಎಂಎಸ್ಎಂಇ ಗಳು ತಯಾರಿಕಾ ಮತ್ತು ಸೇವಾ ಸೆಕ್ಟರ್ ಗಳಲ್ಲಿ ಮಹತ್ವದ ಸುಧಾರಣೆ ಜಾರಿಗೆ ತರಲು ಮುಂದಾಗಿದೆ. ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಪೈಕಿ 40% ರಷ್ಟು ಸಂಸ್ಥೆಗಳಲ್ಲಿ ಸೌರಫಲಕ ಅಳವಡಿಸುವುದು, ಎಲೆಕ್ಟ್ರಾನಿಕ್ ವಾಹನ ಬಳಕೆ ಇತ್ಯಾದಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸುವತ್ತ ಗಮನ ಹರಿಸುತ್ತಿರುವುದಾಗಿ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಆದ ಸಿಡ್ ಬಿ ಯ ಎಂಎಸ್ಎಂಇ ಔಟ್ ಲುಕ್ ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.
ಉತ್ಪಾದನೆ ಹೆಚ್ಚಳ, ಬೇಡಿಕೆ ಹೆಚ್ಚಳ, ಹೆಚ್ಚಿನ ಮಾರಾಟ ಮಾಡಿ ಲಾಭದ ನಿರೀಕ್ಷೆಯಲ್ಲಿ ಎಂಎಸ್ಎಂಇಗಳಿವೆ. ಬಹುತೇಕ ಎಂಎಸ್ಎಂಇಗಳು ಉದ್ಯೋಗಾವಕಾಶ ಹೆಚ್ಚಿಸಲು ನಿರ್ಧರಿಸಿದ್ದು ಮ್ಯಾನ್ಯುಫ್ಯಾಕ್ಚರಿಂಗ್ ಸೆಕ್ಟರ್ನ 40% ಎಂಎಸ್ಎಂಇಗಳು, ಸರ್ವಿಸ್ ಸೆಕ್ಟರ್ನಲ್ಲಿ 37%ದಷ್ಟು ಎಂಎಸ್ಎಂಇಗಳು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಜ್ಜಾಗಿದೆ. ಉತ್ಪಾದನೆಯ ವೆಚ್ಚ ಮತ್ತು ಸಂಬಳ ವೆಚ್ಚ ಹೆಚ್ಚಾಗಿದ್ದರೂ ಕೂಡ ಬಹುತೇಕ ಎಂಎಸ್ಎಂಇಗಳು ಲಾಭ ಹೆಚ್ಚಳದ ನಿರೀಕ್ಷೆಯಲ್ಲಿವೆ ಎಂಬುದು ಸಿಡ್‌ಬಿಯ ತ್ರೈಮಾಸಿಕ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.
ಸಿಡ್ ಬಿಯ ಚೇರ್ಮನ್ ಮತ್ತು ಎಂಡಿ ಆದ ಮನೋಜ್ ಮಿಟ್ಟಲ್ ಅವರು ಈ ಬಗ್ಗೆ ಮಾತನಾಡಿದ್ದು, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಅನಿಶ್ಚಿತತೆ ಸಂದರ್ಭದಲ್ಲಿ ಎಂಎಸ್ ಎಂಇ ಗಳು ಗಮನಾರ್ಹ ಪರಿಣಾಮ ಬೀರುತ್ತಿವೆ. ಉದ್ಯೋಗ ಸೃಷ್ಟಿಗೆ ಮತ್ತು ಸುಸ್ಥಿರ ತಂತ್ರಜ್ಞಾನಗಳ ಅಳವಡಿಕೆಗೆ ಎಂಎಸ್ಎಂಇ ಗಳ ಬಂಡವಾಳದ ವೆಚ್ಚ ವಿನಿಯೋಗವಾಗುವುದು ಅಭಿವೃದ್ಧಿ ಪರ ಧೋರಣೆಯಾಗಿದೆ. ಸುಸ್ಥಿರ ತಂತ್ರಜ್ಞಾನ ಅಳವಡಿಕೆಯು ದೇಶದ ಆರ್ಥಿಕತೆಗೆ ಬಲ ತುಂಬಲಿದೆ ಎಂದು ಹೇಳಿದ್ದಾರೆ.
