ಬೆಂಗಳೂರು:
ಧರ್ಮಸ್ಥಳ ಪ್ರಕರಣದ ವಿಚಾರದಲ್ಲಿ ಗುರುವಾರ ಮಹತ್ವದ ಬೆಳವಣಿಗೆ ನಡೆದಿದೆ. ಅತ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದರೆ ಇತ್ತ ಎಐ ವಿಡಿಯೊ ಮೂಲಕ ಕಥೆ ಕಟ್ಟಿದ್ದ ಯೂಟ್ಯೂಬರ್ ಸಮೀರ್‌ಗೆ ಬಂಧನ ಭೀತಿ ಎದುರಾಗಿದೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಪೊಲೀಸರು ಸುತ್ತುವರಿದಿದ್ದು, ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆನಂದ್ ಎನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಆದರೆ ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದು, ಬೆಳ್ತಂಗಡಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಸಮೀರ್‌ನನ್ನು ವಶಕ್ಕೆ ಪಡೆದು ಬೆಳ್ತಂಗಡಿಗೆ ವಿಚಾರಣೆಗೆ ಕರೆತರಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ. ಆತ ಮನೆಯಲ್ಲಿ ಇಲ್ಲ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮೀರ್ ಮೇಲೆ ಹಲವು ಪ್ರಕರಣ ದಾಖಲಾಗಿವೆ. ಜುಲೈಯಲ್ಲಿಯೇ ಈತನ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸುಗಳು ದಾಖಲಾಗಿದ್ದವು. ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೊ ಮಾಡಿರುವುದು, ಜನರಲ್ಲಿ ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿರುವುದು ಮುಂತಾದ ಪ್ರಕರಣಗಳಿವೆ.
ಎಂಜಿನಿಯರಿಂಗ್ ಪದವೀಧರನಾಗಿರುವ ಸಮೀರ್ ಎಂ.ಡಿ. ಮೂಲತಃ ಬಳ್ಳಾರಿ ಜಿಲ್ಲೆಯವನು. ʼದೂತʼ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಅನೇಕ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಈ ಪೈಕಿ ಸೌಜನ್ಯಾ ಕೊಲೆ ಪ್ರಕರಣದ ಕುರಿತು ಮಾಡಿದ್ದ ಎಐ ವಿಡಿಯೊ ಕೆಲವು ತಿಂಗಳ ಹಿಂದೆ ಭಾರಿ ಸಂಚಲನ ಸೃಷ್ಟಿಸಿತ್ತು. ಈ ವಿಡಿಯೊದಲ್ಲಿ ಸಮೀರ್ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾನೆ ಎನ್ನು ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಅಲ್ಲದೆ, ಸಮೀರ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದೂ ಸೂಚಿಸಿದ್ದರು. ಇದೀಗ ಮತ್ತೆ ಬಂಧನ ಭೀತಿ ಎದುರಾಗಿದೆ.
