ಬೆಂಗಳೂರು:
ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ 2025ರ ಫೆ.25 ರಿಂದ 14ರ ವರೆಗೆ ನಡೆಯಲಿರುವ ಜಾಗತಿಕ ಸಮಾವೇಶಕ್ಕೆ ಹೆಚ್ಚಿನ ಅನುದಾನ ನೀಡಲು ಸಮ್ಮತಿ ನೀಡಲಾಗಿದೆ.
ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ವಾಣಿಜ್ಯ ಮತ್ತು ಕೈಗಾರಿಕೆಯಡಿ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
2025 ರ ಫೆ.12 ರಿಂದ ಫೆ.14ರ ವರೆಗೆ ಆಯೋಜನೆ ಮಾಡಲು 75 ಕೋಟಿ ಒದಗಿಸಿದ್ದು, ಹೆಚ್ಚುವರಿಯಾಗಿ 15 ಕೋಟಿ ಒದಗಿಸಲು ಇಂದಿನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಬಂಡವಾಳ ಹೂಡಿಕೆ ಆಕರ್ಷಣೆಗೆ ನಾಲೆಡ್ಜ್ ಪಾರ್ಟನರ್ ಆಯ್ಕೆ ಕುರಿತು ಕರೆದ ಟೆಂಡರ್ನಲ್ಲಿ 21 ಕೋಟಿ ರೂ. ಟೆಂಡರ್ ಕೋಟ್ ಮಾಡಿದ್ದ ಬಾಸ್ಟನ್ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿಯವರಿಗೆ ಟೆಂಡರ್ ಕೊಡಲಾಗಿದೆ. ಒಂದೇ ಟೆಂಡರ್ ಬಂದಿದ್ದ ಕಾರಣಕ್ಕೆ ಅವರಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.
ಹಿಂದಿನ ಸಚಿವ ಸಂಪುಟದಲ್ಲಿ 147 ಟೆಂಡರ್ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಇವುಗಳಲ್ಲಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲಾಗಿದೆ ಎನ್ನುವ ಅವಲೋಕನ ನಡೆಸಲಾಯಿತು. ಇದರಲ್ಲಿ 94 ಪ್ರಸ್ತಾವಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. 19 ಟೆಂಡರ್ ಪರಿಶೀಲನೆಯಲ್ಲಿವೆ. 18 ಟೆಂಡರ್ಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಟೆಂಡರ್ ಕಾಮಗಾರಿ ಮುಕ್ತಾಯಗೊಂಡಿದೆ. 53 ಟೆಂಡರ್ ಕರೆಯಲು ಬಾಕಿ ಇವೆ, ಸಂಪುಟ ಇವುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಅನುಮೋದನೆ ಕೊಟ್ಟಿರುವುದಕ್ಕೆಲ್ಲಾ ಟೆಂಡರ್ ಕರೆದು ಕೆಲಸ ಆರಂಭಿಸಲು ಸಿಎಂ ಸೂಚನೆ ನೀಡಿದರು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಡಿ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಾಹನ ಚಾಲಕರ ವಿಲೀನ ಕುರಿತು ಕೆಎಟಿ ತೀರ್ಪಿನಂತೆ ಇಬ್ಬರು ಅಧಿಕಾರಿಗಳ ಹುದ್ದೆ ವಿಲೀನಗೊಳಿಸಲು ಸಂಪುಟ ಒಪ್ಪಿದೆ. ಕಾರ್ಮಿಕ ಇಲಾಖೆಯಡಿ ವೈದ್ಯಕೀಯ ಗುತ್ತಿಗೆ ಇಲಾಖೆ ಸೇವಾ ಸಕ್ರಮಾತಿಗೆ ಚರ್ಚೆಯಾಗಿ ಮುಂದೂಡಿಕೆ ಮಾಡಲಾಗಿದೆ. ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮಕ್ಕೆ 112 ಹೊಸ ಪೂರ್ಣ ಕವಚ ನಿರ್ಮಿತ ಬಿಎಸ್ 4 ಬಸ್ಗಳನ್ನು 46.48 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ ನೀಡಲಾಯಿತು. 62 ಹೊಸ ಬಸ್ ಕಲ್ಯಾಣ ಕರ್ನಾಟಕ್ಕೆ ಮತ್ತು 50 ಬಸ್ ವಾಯುವ್ಯ ಸಾರಿಗೆಗೆ ನೀಡಲಾಗುತ್ತದೆ ಎಂದರು. ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ನ್ಯಾಯಾಲಯ ನಿರ್ಮಿಸುವ ಯೋಜನೆಗೂ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಕುರಿತು ಚರ್ಚೆಯಾಗಿಲ್ಲ, ವಾಲ್ಮೀಕಿ ನಿಗಮ ಹಗರಣ ವಿಚಾರದಲ್ಲಿ ನಾಗೇಂದ್ರ ವಿಚಾರ ಚರ್ಚೆಗೆ ಬಂದಿಲ್ಲ. ಬಿಎಸ್ವೈ ಬಂಧನ ಸಿದ್ಧತೆ ವಿಷಯವೂ ಪ್ರಸ್ತಾಪ ಆಗಿಲ್ಲ, ಮೂರು ತಿಂಗಳ ನಂತರ ಸಂಪುಟ ಸದಸ್ಯರು ಸೇರಿದ್ದೆವು. ವಿಸ್ತೃತವಾದ ಚರ್ಚೆ ಮಾಡಿದೆವು. ಆಡಳಿತವನ್ನು ಹೆಚ್ಚು ಸುಧಾರಿತವಾಗಿ ಮಾಡಬೇಕು, ರಾಜ್ಯದ ಆಡಳಿತವನ್ನು ಹೆಚ್ಚು ವೇಗ, ಜನಸ್ನೇಹಿ, ಜನಪರ ಮಾಡಬೇಕು. ವಿಳಂಬವಾಗುವುದನ್ನು ನಿರ್ಲಕ್ಷಿಸಬಾರದು. ವಿಳಂಬವಾಗದಂತೆ ಕೆಲಸವಾಗಬೇಕು, ಆಡಳಿತವನ್ನು ಮತ್ತಷ್ಟು ಉತ್ತಮಗೊಳಿಸಲು ಬೇಕಾದ ಕ್ರಮದ ಕುರಿತು ಸಿಎಂ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಿಎಸ್ಗೆ ಕೆಲ ಸಲಹೆ ನೀಡಲಾಯಿತು, ಜನತಾದರ್ಶನ ಅಹವಾಲು ತಕ್ಷಣ ಗಂಭೀರವಾಗಿ ಪರಿಗಣಿಸಿ ಕಾರ್ಯ ಮಾಡಬೇಕು ಎನ್ನುವ ಸೂಚನೆ ನೀಡಲಾಯಿತು ಎಂದು ಮಾಹಿತಿ ನೀಡಿದರು.