ತಿಪಟೂರು :

ಸಂಚಾರಿ ವಿಜಯ್ ಅವರಿಗೂ ತಿಪಟೂರಿಗೂ ಅವಿನಾಭಾವ ಸಂಬಂಧ. ಇಲ್ಲಿ ಷಡಕ್ಷರ ಬಡಾವಣೆಯ ಮನೆ ಮಗನಾಗಿದ್ದ ವಿಜಯ್ ಅವರು ನಿಜಕ್ಕೂ ನಮ್ಮ ಮಗನಾಗಿರಬಾರದಿತ್ತೆ ಎಂಬಷ್ಟು ಮಟ್ಟಿಗೆ ಜನರಲ್ಲಿ ಬೆರೆತುಹೋಗಿದ್ದರು.
ಮೊನ್ನೆ ಸಂಚಾರಿ ವಿಜಯ್ ಅವರು ಮರಣ ಹೊಂದಿದಾಗಲಂತೂ ತಿಪಟೂರಿನ ಜನರು ಮಮ್ಮಲ ಮರುಗಿದರು. ಮೂಲತಃ ಸಂಚಾರಿ ವಿಜಯ್ ಹೆಸರಿನಿಂದ ಪರಿಚಿತರಾಗಿರುವ ಬಿ.ವಿಜಯ್ಕುಮಾರ್ ಅವರು ಜುಲೈ 17, 1983 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಜನಿಸಿದರು. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯ ಚಿತ್ರಕಲಾವಿದರಾಗಿದ್ದು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮ ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದಾರೆ. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೆ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದ ವಿಜಯ್, ಪಿಯುಸಿ ಹಂತದಲ್ಲಿ ತಿಪಟೂರಿನ ಪ್ರಸಿದ್ಧ ಕಲ್ಪತರು ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಇಲ್ಲಿ ಅಧ್ಯಯನ ಮಾಡುವ ವೇಳೆ ತಮಗೆ ಅಚ್ಚುಮೆಚ್ಚಾಗಿದ್ದ ಪ್ರವಾಸಕ್ಕೆ ತನ್ನ ಗೆಳೆಯರನ್ನು ಕಟ್ಟಿಕೊಂಡು ಸೈಕಲ್ನಲ್ಲೇ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಮುಂದೆ ಪ್ರಸಿದ್ಧರಾದ ಮೇಲೂ ಬೈಕ್ ಮತ್ತು ಕಾರ್ನಲ್ಲಿ ಪ್ರವಾಸ ಮುಂದುವರೆಸಿಕೊಂಡು ಹೋಗುತ್ತಿದ್ದರೆಂದು ವಿಜಯ್ ಆಪ್ತ ಸ್ನೇಹಿತ ಕಂಚಾಘಟ್ಟದ ಸಚಿನ್ಚಿಂದಗಿರಿ ತಿಳಿಸಿದರು.
ಪಿಯುಸಿ ಬಳಿಕ ಎಂಜಿನಿಯರಿಂಗ್ ಸೀಟು ಸಿಕ್ಕರೂ ಬಡತನದ ಕಾರಣದಿಂದ ಕಲ್ಪತರು ಕಾಲೇಜಿನಲ್ಲೆ ಬಿಎಸ್ಸಿ ಪದವಿಗೆ ಸೇರ್ಪಡೆಯಾಗಿ 2 ವರ್ಷಗಳ ನಂತರ ಎಂಜಿನಿಯರಿಂಗ್ ಓದಲು ಬೆಂಗಳೂರಿಗೆ ತೆರಳುತ್ತಾರೆ. ಬೆಂಗಳೂರಿಗೆ ಹೋದ ನಂತರವು ಷಡಕ್ಷರ ಬಡಾವಣೆಯಲ್ಲಿ ಪ್ರತಿ ವರ್ಷ ಗಣೇಶನನ್ನು ಕೂರಿಸುತ್ತಿದ್ದ ಸಂದರ್ಭದಲ್ಲಿ ಸತತವಾಗಿ 11 ವರ್ಷ ಎಷ್ಟೇ ಕೆಲಸದ ಒತ್ತಡವಿದ್ದರೂ ಸಹ ಗಣಪತಿ ಹಬ್ಬಕ್ಕೆ ಬಂದು ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು.
ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ತಲೆಗೆ ತೀವ್ರವಾಗಿ ಗಾಯಗೊಂಡಿದ್ದರಿಂದ ಮೆದುಳಿಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ಹೋಗಿದ್ದರು. ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಸುಧಾರಣೆ ಕಾಣದೆ ಮೆದುಳು ನಿಷ್ಕ್ರಿಯವಾಗಿತ್ತು. ಇಂತಹ ಸಮಯದಲ್ಲಿ ಕುಟುಂಬದವರ ಇಚ್ಛೆಯಂತೆ ವಿಜಯ್ ಅವರ ಅಂಗಾಂಗ ದಾನ ಪ್ರಕ್ರಿಯೆಗಳನ್ನು ಕೈಗೊಂಡು ಜೂನ್ 15 ರ ಬೆಳಗಿನ ಜಾವ ಮರಣ ಹೊಂದಿದರೆಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ದೇಹವನ್ನು ಅನಾವಶ್ಯಕವಾಗಿ ಮಣ್ಣಿಗೆ ಸೇರಿಸಬಾರದೆಂಬ ಉದ್ದೇಶದಿಂದ ತಮ್ಮ ಅಂಗಾಂಗಳನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದು, ಇಲ್ಲೂ ಸಹ ತಮ್ಮ ಸಂಚಾರವನ್ನು ಮುಂದುವರೆಸಿದ್ದಾರೆ.

ಚಲನಚಿತ್ರ ಮತ್ತು ರಂಗಭೂಮಿ ನಟ ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ಇವರು ಒಬ್ಬರಾಗಿದ್ದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ಮೊದಲಿನಿಂದಲೂ ಕಷ್ಟ ಜೀವಿಯಾಗಿದ್ದ ವಿಜಯ್ ತಾನು ಏನಾದರೂ ಸಾಧಿಸಬೇಕು ಎಂಬ ಹಂಬಲದಿಂದ ಚಿತ್ರರಂಗಕ್ಕೆ ಹೋಗಿ ಡಾ.ರಾಜ್ಕುಮಾರ್ ನಂತರ ಕನ್ನಡ ಭಾಷೆಯಲ್ಲಿ 2014ನೇ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
-ಸಿದ್ದೇಶ್, ಸ್ನೇಹಿತ, ತಿಪಟೂರು
ವಿಜಯ್ ಷಡಕ್ಷರ ಬಡಾವಣೆಯ ಮನೆ ಮಗನಾಗಿದ್ದನು, ಎಲ್ಲರ ಮನೆಯಲ್ಲೂ ಏನಾದರು ಕೆಲಸವಿದ್ದರೆ ನಿಸ್ಸಂಕೋಚವಾಗಿ ಎಲ್ಲರಿಗೂ ಕೆಲಸವನ್ನು ಮಾಡಿಕೊಡುತ್ತಿದ್ದನು. ಗಣಪತಿ ಹಬ್ಬ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಗೆಳೆಯರನ್ನೆಲ್ಲಾ ಕಟ್ಟಿಕೊಂಡು ಗಣೇಶನನ್ನು ಕೂರಿಸಿ ಅದನ್ನು ವಿಸರ್ಜಿಸುವವರೆಗೂ ಎಲ್ಲೂ ಹೋಗುತ್ತಿರಲಿಲ್ಲ. ಮುಂದೆ ಬೆಂಗಳೂರಿಗೆ ಹೋದ ಮೇಲೂ ಈ ಪರಂಪರೆಯನ್ನು ಮುಂದುವರೆದುಕೊಂಡೆ ಬಂದಿದ್ದ.
-ರಾಜು, ಸ್ನೇಹಿತ ಮತ್ತು ತುಮಕೂರು ವಿ.ವಿ ಸಿಂಡಿಕೇಟ್ ಸದಸ್ಯ
-ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








