ಬ್ರೀಟಿಷರ ನಿದ್ದೆಗೆಡಿಸಿತ್ತು ಜಡಗ-ಬಾಲರ ಜೋಡಿ
ಲೇಖಕ-ಬಸವರಾಜ ಭೂಷಣ್ಣವರ, ಮುಧೋಳ
ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಅತ್ಯಂತ ರೋಚಕ ಮತ್ತು ಐತಿಹಾಸಿಕ ಘಟನೆಗಳಲ್ಲಿ ಇದು ಒಂದು. ಅಪ್ಪಟ ದೇಶಪ್ರೇಮಿಗಳ ಸ್ವಾಭಿಮಾನಿಗಳ ಮಹಾಪರಾಕ್ರಮಿಗಳ ವೀರರ ತವರೂರು ದಟ್ಟ ಅರಣ್ಯ ತಟದಲ್ಲಿರುವ ಬೇಟೆಗಾರರ ಊರೇ ಹಲಗಲಿ. ಬೇಡ ಜನಾಂಗ ಹೆಚ್ಚಾಗಿ ನೆಲೆಸಿರುವ ಹಳ್ಳಿ ಮೊದಲು ಮುಧೋಳ ಸಂಸ್ಥಾನದಲ್ಲಿತ್ತು. ಮೊದಲು ಬ್ರಿಟಿಷ್ ಆಡಳಿತದಲ್ಲಿ ಕಲಾದಗಿ ಜಿಲ್ಲೆಗೆ ಸೇರಿತ್ತು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳಲ್ಲಿ ನಮ್ಮ ಕರ್ನಾಟಕದ ಪಾಲು ದೊಡ್ಡದಿದೆ. ಬ್ರಿಟಿಷರ ವಿರುದ್ಧ ಎದ್ದ ಬಂಡಾಯಗಳಲ್ಲಿ ಕಿತ್ತೂರಿನ ಬಂಡಾಯ, ಕೊಡಗಿನ ಬಂಡಾಯ, ಸುರಪುರ ಬಂಡಾಯ ಹಲಗಲಿಯ ಬಂಡಾಯ ಪ್ರಮುಖವಾದವುಗಳು. ಇವುಗಳಲ್ಲಿ ಎಲ್ಲರ ಗಮನ ಸೆಳೆಯುವ ಹಲಗಲಿ ಎಂಬ ಚಿಕ್ಕ ಗ್ರಾಮದ ಕೆಚ್ಚೆದೆಯ ಬಂಡಾಯ. ಗುಲಾಮಗಿರಿಯನ್ನು ಒಪ್ಪದ ಈ ಬಂಡಾಯ ಲಾವಣಿ ರೂಪದಲ್ಲಿ ಇಂದಿಗೂ ಉಳಿದಿರುವ ಒಂದು ರೋಮಾಂಚನಕಾರಿ ಕಥನವಾಗಿದೆ.
ವ್ಯಾಪಾರಕ್ಕೆ ಬಂದ ಬ್ರಿಟಿಷರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿ ಭಾರತ ದೇಶದ ಆಡಳಿತದ ಸೂತ್ರ ಹಿಡಿದರು ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಲ್ಲ ಭಾರತೀಯರು ಬ್ರಿಟಿಷರ ವಿರುದ್ಧ ತಿರುಗಿ ಬೀಳುತ್ತಾರೆ. ಭಾರತೀಯರಿಗೆ ಅದು ಸ್ವಾತಂತ್ರ ಸಂಗ್ರಾಮವಾದರೆ ಬ್ರಿಟಿಷರು ಅದನ್ನು ಸಿಪಾಯಿ ದಂಗೆ ಎಂದು ಕರೆದರು.
ಎಲ್ಲ ಭಾರತೀಯರು ಕಂಪನಿ ಸರ್ಕಾರದ ವಿರುದ್ಧ ತಿರುಗಿ ಬಿದ್ದುದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಬ್ರಿಟಿಷರಿಗೆ ಮನತಟ್ಟಾಯಿತು. ನಾವೇನಾದರೂ ಎಲ್ಲಾ ಶಸ್ತ್ರಾಸ್ತ್ರಗಳನ್ನು ಭಾರತೀಯರಿಗೆ ಕೊಟ್ಟರೆ ಮತ್ತು ಇಟ್ಟುಕೊಳ್ಳಲು ಬಿಟ್ಟರೆ ಒಂದಲ್ಲ ಒಂದು ದಿನ ನಮ್ಮ ಮೇಲೆ ತಿರುಗಿ ಬೀಳುತ್ತಾರೆ. ನಾವು ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿಗೆ ಬರಬಹುದು ಆದ್ದರಿಂದ ಭಾರತೀಯರ ಧೈರ್ಯವನ್ನು ಕುಗ್ಗಿಸಬೇಕು ಅವರ ಶಕ್ತಿಗೆ ಮಟ್ಟ ಹಾಕಬೇಕು ಎಂಬ ಉದ್ದೇಶದಿಂದ ಅದೇ ವರ್ಷ ಸಪ್ಟಂಬರ್ ೧೧ರಂದು ನಿಶಸ್ತ್ರಿಕರಣ ಕಾಯ್ದೆಯನ್ನು ಜಾರಿಗೆ ತರುತ್ತಾರೆ.
ಭಾರತದ ಪ್ರಜೆಗಳು ಯಾರು ಯಾವುದೇ ರೀತಿಯ ಶಸ್ತ್ರಗಳನ್ನು ಹೊಂದುವಂತಿಲ್ಲ. ದಿನಬಳಕೆ ವಸ್ತು ಮತ್ತು ಜೀವನಾಶಕ ಶಸ್ತ್ರಗಳನ್ನು ಕೂಡ ಕಂಪನಿ ಸರ್ಕಾರಕ್ಕೆ ಹಿಂದಿರುಗಿಸಬೇಕೆಂದು ಕಾಯ್ದೆಯನ್ನು ಜಾರಿ ಮಾಡುತ್ತಾರೆ. ಆ ಒಂದು ಸಂದರ್ಭದಲ್ಲಿ ಹಲಗಲಿ ಬೇಡರು ಈ ಕಾಯ್ದೆಯನ್ನು ವಿರೋಧಿಸಿ, ಕಾಯ್ದೆಯ ವಿರುದ್ಧ ಸಿಡಿದೆದ್ದರೂ ಏಕೆಂದರೆ ಅವರ ಕುಲಕಸಬು ಬೇಟೆಯನ್ನಾಡಿ ತಮ್ಮ ಜೀವನವನ್ನು ನಡೆಸುತ್ತಿದ್ದರು.
ನಾವು ಏಕೆ ಬ್ರಿಟಿಷರಿಗೆ ನಮ್ಮ ಶಸ್ತ್ರಾಸ್ತ್ರಗಳನ್ನು ಕೊಡಬೇಕು ನಾವು ಬೇಟೆಗಾರರು, ಇನ್ನೊಂದು ನಾವು ಭಾರತೀಯರು ನಾವು ಏಕೆ ಅವರಿಗೆ ಹೆದರಬೇಕು ಎಂಬುದು ಅವರಲ್ಲಿ ಅಭಿಮಾನವಿತ್ತು.ತಮ್ಮ ಚಕ್ರಾಧಿಪತ್ಯಕ್ಕೆ ಅಡ್ಡಿಪಡಿಸಿದವರನ್ನು ಮೋಸದಿಂದಲೂ ಕುತಂತ್ರಿ ಚಾಣಾಕ್ಷ ಬುದ್ಧಿಯಿಂದಲೂ ಅವರ ಮೇಲೆ ಏಕಾಏಕಿ ದಾಳಿಯಿಂದಲೂ ಸೋಲಿಸಿ ಇಡೀ ಭಾರತವನ್ನು ಕಬಳಿಸಿದ ಬ್ರಿಟಿಷರಿಗೆ ಆಗಿನ ಕಾಲದ ಇತಿಹಾಸಕಾರರ ಪ್ರಕಾರ ೫೦೦ ಜನ ಸಂಖ್ಯೆಯ ಈ ಹಲಗಲಿ ಊರಿನ ಬೇಡರು ಸವಾಲಾಗಿದ್ದರು.
ಭಾರತ ದೇಶದಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದ ಬ್ರಿಟಿಷ್ ಕಂಪನಿ ಸರ್ಕಾರ ಈ ಭಾಗದಲ್ಲಿ ಜಾರಿ ತರುವ ಹೊಣೆಯನ್ನು ಅಂದಿನ ದಕ್ಷಿಣ ಮರಾಠ ವಿಭಾಗದ ಕಮಾಂಡರ್ ಆಗಿದ್ದ ಲೆಫ್ಟ ನಂಟ್ ಕರ್ನಲ್ ಮಲ್ಕಮ್ ಮುಖಾಂತರ ಬೆಳಗಾವಿಯ ಮೆಜಿಸ್ಟ್ರೇಟ್ ಜೆ.ಬಿ ಸೆನೆಟ್‌ಕರ್ ಈ ಕಾರ್ಯದ ಹೊಣೆ ಹೊರುತ್ತಾನೆ. ಮುಧೋಳ ಮಹಾರಾಜರ ಕಾರ ಬಾರಿಯದ ಕೃಷ್ಣಜಿ ರಾವ್ ಅವರ ಜೊತೆ ಸಮಾಲೋಚಿಸಿ ಸಂಸ್ಥಾನದ ಎಲ್ಲರೂ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಆಜ್ಞೆಯನ್ನು ಹೊರಡಿಸಿದರು. ಮುಧೋಳ ಸಂಸ್ಥಾನದ ಸೈನಿಕರಲ್ಲಿ ಮುಖ್ಯ ಭಾಗವಾದ ಬೇಡರು ಇದಕ್ಕೆ ಒಪ್ಪಿಗೆ ಸಮ್ಮತಿಸಲಿಲ್ಲ. ಆಯುಧಗಳೆಂದರೆ ತಮಗೆ ದಿನನಿತ್ಯ ಆಹಾರ ಒದಗಿಸುವ ಸಾಧನಗಳೆಂದು ತಲತಲಾಂತರದಿಂದ ಅವು ತಮ್ಮ ಕುಲದೇವತೆಗಳೆಂದು ಪೂಜಿಸುತ್ತಾ ಕ್ಷಾತ್ರ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುತ್ತಾರೆ. ಆಯುಧಗಳಿಲ್ಲದೆ ತಾವು ಬದುಕುವುದು ಅಸಾಧ್ಯವೆಂದು ಹಾಗಾಗಿ ತಮ್ಮ ಆಯುಧಗಳನ್ನು ಒಪ್ಪಿಸುವುದಿಲ್ಲವೆಂದು ಗುಡುಗುತ್ತಾರೆ.
ಈ ಸಂದರ್ಭದಲ್ಲಿ ಕಾರಬಾರಿ ಕೃಷ್ಣ ಜಿ ರಾವ್ ಬುದ್ದಿ ಹೇಳಲು ಹಲಗಲಿ ಗ್ರಾಮಕ್ಕೆ ಬರುತ್ತಾರೆ ನಿಮ್ಮಲ್ಲಿ ಇರುವಂತಹ ಆಯುಧಗಳನ್ನೆಲ್ಲಾ ಕಂಪನಿ ಸರಕಾರಕ್ಕೆ ಒಪ್ಪಿಸಿ ಎಂದು ಮನವೋಲಿಸಲು ಪ್ರಯತ್ನ ಮಾಡುತ್ತಾರೆ. ಸ್ವಾಭಿಮಾನಿ ಬೇಡರು ಇವರ ಮಾತುಗಳನ್ನು ಕೇಳಿ, ಕೆಂಡಮಂಡಲವಾಗಿ ನಮ್ಮಲ್ಲಿರುವ ಆಯುಧಗಳನ್ನೆಲ್ಲ ಒಪ್ಪಿಸುವುದು ಸಾಧ್ಯವೇ ಇಲ್ಲವೆಂದು ಕಡ್ಡಿ ತುಂಡು ಆದಂತೆ ಹೇಳಿ ಬಿಟ್ಟರು. ಬೇಕೆಂದರೆ ಕಂಪನಿ ಸರ್ಕಾರದ ವಿರುದ್ಧ ಹೋರಾಡಿ ಸಾಯುತ್ತೇವೆ ಆದರೆ ಸ್ವಾಭಿಮಾನದ ಆತ್ಮ ಗೌರವದ ಸಂಕೇತವಾದಗಳನ್ನು ಮಾತ್ರ ಬಿಟ್ಟುಕೊಡುವ ಮಾತಿಲ್ಲವೆಂದು ಅವರನ್ನು ಮರಳಿ ಕಳುಹಿಸಿದರು. ಸಂಧಾನದ ಎಲ್ಲ ಬಾಗಿಲುಗಳು ಒಂದರ ಹಿಂದೆ ಒಂದು ಮುಚ್ಚಿಕೊಂಡು ಬಿಡುತ್ತವೆ. ಇದು ಹಲಗಲಿ ಬೇಡರಿಗೆ ಯುದ್ಧ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಈ ಸಂದರ್ಭದಲ್ಲಿ ಮುಧೋಳ ಮಹಾರಾಜರ ಪರಾಕ್ರಮಿ ಸೈನಿಕನಾದ ಬಾಬಾಜಿ ಸಾವಜಿ ನಿಂಬಾಳ್ಕರ್ ಹಲಗಲಿ ಬೇಡರಿಗೆ ಯುದ್ಧದ ಬಗ್ಗೆ ತಿಳಿಸಿಕೊಡಲು ಗುರುವಾಗಿ ನಿಲ್ಲುತ್ತಾನೆ. ಬೇಡರ ಹಿರಿಯರನ್ನು ಯುವಕರನ್ನು ಮಹಿಳೆಯರನ್ನು ಮಕ್ಕಳನ್ನು ಒಂದೆಡೆ ಸೇರಿಸಿ ಆಯುಧಗಳು ನಿಮ್ಮ ಮನೆಯ ಹೆಣ್ಣು ಮಕ್ಕಳಿದ್ದಂತೆ ಅವುಗಳನ್ನು ಕಾಪಾಡುವ ಜವಾಬ್ದಾರಿ ನಿಮ್ಮೆಲ್ಲರದ್ದು ಎಂದು ಹುರುದುಂಬಿಸಿ ಯುದ್ಧಕ್ಕೆ ಆತ್ಮವಿಶ್ವಾಸ ತರಬೇತಿ ಕೊಟ್ಟು ಸನ್ನದರನ್ನಾಗಿಸಿದ.
ಬೇಡರ ಪ್ರಮುಖರಾದ ಪೂಜಾರಿ ಹನುಮ, ಜಡಗ, ಬಾಲ ಮತ್ತು ರಾಮ ಎನ್ನುವ ಯುವಕರು ತಮ್ಮ ಸಮುದಾಯದ ಆತ್ಮಗೌರವದ ಪ್ರತಿಕವಾಗಿ ಹೋರಾಡಲು ವೀರ ಪ್ರತಿಜ್ಞೆ ಮಾಡಿದರು ಇವರಿಗೆ ಸುತ್ತಮುತ್ತಲಿನ ಹಳ್ಳಿಯ ಎಲ್ಲ ಬೇಡರು ಇವರಿಗೆ ಬೆಂಗಾವಲಾಗಿ ನಿಂತು ಹೋರಾಡುವ ನಿರ್ಧಾರ ಮಾಡಿಯೇ ಬಿಟ್ಟರು.ಬ್ರಿಟಿಷರ ವಿರುದ್ಧ ಯುದ್ಧಕ್ಕೆ ತಯಾರಿ ನಡೆಸಿದ ಬೇಡರು ದಟ್ಟ ಅರಣ್ಯ ಪ್ರದೇಶದಲ್ಲಿ ಮದ್ದು ಗುಂಡುಗಳನ್ನು ತಯಾರಿಸುತ್ತಾರೆ. ಅರಣ್ಯ ಪ್ರದೇಶದಲ್ಲಿ ಮದ್ದು-ಗುಂಡುಗಳನ್ನು ತಯಾರಿಸಿ ಊರಿನ ಸಮೀಪವಿರುವ ದೇವಸ್ಥಾನದ ನೆಲಮಹಡಿಯಲ್ಲಿ ಸಂಗ್ರಹಿಸಿಡುತ್ತಾರೆ ಒಂದು ರೀತಿಯಲ್ಲಿ ಮದ್ದು- ಗುಂಡುಗಳನ್ನು ಸಂಗ್ರಹಿಸಿಡುವ ಉಗ್ರಾಣವಾಗಿರುತ್ತದೆ. ಪ್ರಸ್ತುತ ಇಂದಿಗೂ ಕೂಡ ಮದ್ದು-ಗುಂಡುಗಳನ್ನು ತಯಾರಿಸಿದ ಜಾಗವನ್ನು ಕಾಣಬಹುದ. ಮದ್ದು- ಗುಂಡುಗಳನ್ನು ಸಂಗ್ರಹಿಸಿದಂತ ಸ್ಥಳವನ್ನು ಇಂದಿಗೂ ಕೂಡ ಕರಿಯಪ್ಪನ ದೇವಸ್ಥಾನವೆಂದು ಪೂಜಿಸುವ ಪ್ರತಿತಿ ಕಾಣಬಹುದು.
ಇತಿಹಾಸದ ಕುರುಹುಗಳು ಇಂದಿಗೂ ಕೂಡ ಆಶ್ಚರ್ಯವನ್ನುಂಟು ಮಾಡುತ್ತದೆ. ಈ ಎಲ್ಲ ಬೆಳವಣಿಗೆಯ ಸುದ್ದಿ ತಿಳಿದು ಬ್ರಿಟಿಷರು ಬಿಜಾಪುರದಿಂದ ಅಶ್ವದಳ ತಂದು ಕಲಾದಗಿ ಮಾರ್ಗವಾಗಿ ಹಲಗಲಿ ಮೇಲೆ ದಂಡೆತ್ತಿ ಬರುತ್ತಿರುತ್ತಾರೆ. ಪುಟ್ಟ ಹಳ್ಳಿಯ ಮುಖ್ಯ ದ್ವಾರ ಬಾಗಿಲಿಗೆ ಕುದುರೆಗಳ ಹುಂಕರಿಸುವ ಶಬ್ದ ಕುದುರೆಯನ್ನೇರಿ ಬ್ರಿಟಿಷ ಸೈನಿಕರು ಬರುವುದನ್ನು ಊರಿನ ಕಾವಲುಗಾರನಾಗಿದ್ದ ಮಂಡಗೈ ಭೀಮಣ್ಣ ದೂರದಿಂದ ಗಮನಿಸಿದ ಕೇವಲ ಒಂದೇ ಒಂದು ಕೈಯಿಂದ ಬ್ರಿಟಿಷ್ ಸೈನಿಕರನ್ನು ಎದುರಿ ನಿಲ್ಲುತ್ತಾನೆ. ಜೊತೆಗೆ ಎಲ್ಲ ಊರಿನ ಜನ ಸೇರಿ ಯುದ್ಧಕ್ಕೆ ಸಿದ್ಧರಾಗುತ್ತಾರೆ. ಎದುರಾಳಿಗಳ ಬಲ ಹೆಚ್ಚಾದಂತೆ ಬ್ರಿಟಿಷರು ಹಿಂದೆ ಸರಿದು ಹೋಗುತ್ತಾರೆ. ಬೇಡರಿಗೆ ಇದು ಮೊದಲ ಗೆಲುವು ಆಗುತ್ತದೆ. ಹಿಂದೆ ಸರಿದಂತೆ ಮಾಡಿದ ಬ್ರಿಟಿಷರು ಬಾಗಲಕೋಟೆ, ಕಲಾದಗಿ ಹಾಗೂ ಬೆಳಗಾವಿಯಿಂದ ಇನ್ನಷ್ಟು ಸೈನ್ಯ ತರಿಸಿ ೧೮೫೭ ನವಂಬರ್ ೨೯ರ ಮಧ್ಯರಾತ್ರಿ ವೇಳೆ ಹಲಗಲಿಯನ್ನು ಸುತ್ತುವರೆದ ಬ್ರಿಟಿಷ್ ಸೇನೆ, ಬ್ರಿಟಿಷರ ವಿರುದ್ಧ ಇಡೀ ಹಲಗಲಿಯ ಜನ ಮುಗಿ ಬೀಳುತ್ತಾರೆ ನಡುರಾತ್ರಿಯಲ್ಲಿ ಇವರ ವಿರುದ್ಧ ಮುಗಿದಿದ್ದ ರೀತಿಯಿಂದ ಬ್ರಿಟಿಷ್ ಸೇನೆ ಕಕ್ಕಾಬಿಕ್ಕಿಯಾಗುತ್ತದೆ ಹೆಣ್ಣು ಗಂಡುಗಳೆನ್ನದೆ ಇಡೀ ಊರಿನ ಜನ ಹೋರಾಡುವುದನ್ನು ಕಂಡು ದಂಗಾಗುತ್ತಾರೆ.
ಬಲಾಢ್ಯರಾದ ಬ್ರಿಟಿಷರ ವಿರುದ್ಧ ಬೇಡರ ಹೋರಾಟ ಅಸಾಮಾನ್ಯವೇ ಆಗಿತ್ತು, ಜಡಗ ಬಾಲ ಎಂಬ ವೀರ ಬೇಡರ ಜೋಡಿ ಬ್ರಿಟಿಷರ ರಕ್ತದ ಕೋಡಿಯನ್ನು ಹೊಳೆಯಂತೆ ಹರಸಿದ್ದರು.ಜಡಗ, ಬಾಲ, ಹನುಮ, ರಾಮ ಈ ಜೋಡಿ ತಮ್ಮ ಹತಾರುಗಳಿಂದ ಬ್ರಿಟಿಷರ ವಿರುದ್ಧ ಸೆಣಸಾಡುತ್ತಾರೆ. ಆದರೆ ಇವರ ಸುತ್ತುವರೆದ ಬ್ರಿಟಿಷರು ಹಲಗಲಿ ಜನರ ಮೇಲೆ ಕರುಣೆ ಇಲ್ಲದೆ ಗುಂಡು ಹಾರಿಸುತ್ತಾರೆ. ಬೇಡರ ಕೃಷಿ ಉಪಕರಣಗಳು ದವಸ ಧಾನ್ಯಗಳು ದಿನನಿತ್ಯ ಬಳಸುವ ವಸ್ತುಗಳು ಊರಿನ ಮನೆಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ದೋಚಿಬಿಡುತ್ತಾರೆ. ಇಡೀ ಊರಿಗೆ ಬೆಂಕಿ ಇಡುತ್ತಾರೆ, ಬಚ್ಚಿಕೊಂಡಿದ್ದವರು ಅಲ್ಲೇ ಸುಟ್ಟು ಬೂದಿಯಾದರು, ಬ್ರಿಟಿಷರ ಅಟ್ಟಹಾಸ ಬೆಳಗಾಗುವವರೆಗೆ ಸಾಗಿತ್ತು.
ಹೋರಾಟದ ಕಟ್ಟ ಕಡೆಯದಾಗಿ ಉಳಿದಿದ್ದು ಸುಟ್ಟು ಬೂದಿಯಾದ ಹಲಗಲಿ ಎಂಬ ಶೂರರ ಊರು ಮಾತ್ರ ಅಷ್ಟಕ್ಕೆ ಸುಮ್ಮನೆ ಬಿಡದೆ ಬ್ರಿಟಿಷರು ೨೫೦ ಜನರನ್ನು ಬಂಧಿಸಿ ಜೈಲಿಗೆ ಅಟ್ಟಿದರು. ಮುಂಚೂಣಿಯಲ್ಲಿ ನಿಂತ ಹೋರಾಡಿದ ಕೆಚ್ಚೆದೆಯ ಜಡಗ ಬಾಲ ಹನುಮ ಮತ್ತು ಮೋದಲ್ಗೊಂಡ ೧೩ ಜನರನ್ನು ವಿಚಾರಣೆ ನೆಪವೊಡ್ಡಿ ದಿನಾಂಕ ೧೧ ಡಿಸೆಂಬರ್ ೧೮೫೭ ಶುಕ್ರವಾರದ ಮುಧೋಳ ಸಂತೆಯ ದಿನ ಮುಧೋಳದ ಈಗಿನ ಉತ್ತರ ಗೇಟ್ ಎಂದು ಕರೆಸಿಕೊಳ್ಳುವ ಸ್ಥಳದಲ್ಲಿ ಹಾಡು ಹಗಲೇ ಗಲ್ಲಿಗೇರಿಸಿದರು.
ಅವರ ವಿರುದ್ಧ ಬಂಡಾಯ ಮಾಡಿದವರ ಗತಿ ಏನಾಗುತ್ತದೆ ಎಂಬುದನ್ನು ಜಾಹೀರಾತು ಮಾಡಿದರು ಬಿತ್ತಿ ಚಿತ್ರಗಳನ್ನು ಅಂಟಿಸಿದರು ಮುಂದೆ ಮೂರು ದಿನ ಬಿಟ್ಟು ಮತ್ತೆ ಆರು ಜನರನ್ನು ಹಲಗಲಿಯಲ್ಲಿ ಗಲ್ಲಿಗೇರಿಸಿದರೂ.ಇತಿಹಾಸದ ಒಂದು ರಕ್ತ ಸಿಕ್ತ ನಿಷ್ಕರುಣಿಯ ಅಧ್ಯಾಯ ಅಂತಗೊಂಡಿತ್ತು ಇಲ್ಲಿಂದ ಶುರುವಾದ ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಸದ್ದಿಲ್ಲದೆ ಕೋಟ್ಯಾಂತರ ದೇಶಭಕ್ತರನ್ನು ಹೋರಾಡಲು ಮುನ್ನುಡಿ ಹಾಕಿದ್ದು ಮಾತ್ರ ನಮ್ಮ ಹಲಗಲಿ ಬೇಡರ ದಂಗೆ ಎಂಬುದು ಹೆಮ್ಮೆಯ ಪರ್ವ.
ಇಲ್ಲಿ ಈ ಒಂದು ನಿಶಸ್ತ್ರೀಕರಣ ಎಂಬ ಕಾಯ್ದೆ ಹಲಗಲಿ ಬೇಡರ ನಾಶಕ್ಕೆ ಕಾರಣವಾಗುತ್ತದೆ ಹೋರಾಟ ಮಾಡಿದ್ದು ತಮ್ಮ ಹಕ್ಕಿಗಾಗಿ, ಆತ್ಮಗೌರವಕ್ಕಾಗಿ ಸ್ವಾಭಿಮಾನಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಎನ್ನುವುದು ನೆನೆದಾಗ ರೋಮಾಂಚನವಾಗುತ್ತದೆ, ಧನ್ಯತಾ ಭಾವ ಮೂಡುತ್ತದೆ. ಹಲಗಲಿ ಬಂಡಾಯ ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ ಬೀಡು.
ಜಡಗ ಹೊಡೆದ ಏಟಿಗೆ ಬ್ರಿಟಿಷ್ ಅಧಿಕಾರಿ ಹೆನ್ರಿ ಹಾವ್‌ಲಾಕ್ ನೆಲಕಚ್ಚಿದ. ಈ ಸುದ್ದಿಯನ್ನು ತಿಳಿದು ಕೋಪಗೊಂಡ ಅಲೆಕ್ಸಾಂಡರ್ ವಿಲಿಯಂ ಕರೆ ಎಂಬತ ಇಡೀ ಊರಿಗೆ ಬೆಂಕಿ ಇಡುವಂತೆ ಬ್ರಿಟಿಷ್ ಸೈನಿಕರಿಗೆ ಆದೇಶ ನೀಡುತ್ತಾನೆ.ಆದರೂ ಎದೆಗುಂದದ ಹಲಗಲಿ ಬೇಡರು ಒಟ್ಟಾಗಿ ಹೇಳುತ್ತಾರೆ. ‘ಸಾವಿರಾಳಿಗೆ ಒಬ್ಬ ಕೂಗುತ್ತಾನೋ ಕಡಿ-ಕಡಿರಿ ಅವರನ್ನ ಎಂದು’ ರಾಮವ್ವ ಎನ್ನುವ ವೀರ ಮಹಿಳೆ ಕವನಿಯಲ್ಲಿ ಕಲ್ಲು ಹಾಕಿ ಬ್ರಿಟಿಷರ ಮೇಲೆ ಹೊಡೆಯುತ್ತಾಳೆ.
