ಬೆಂಗಳೂರು
2020ರಲ್ಲಿ ಇಡೀ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ನಟಿ ಸಂಜನಾ ಗಲ್ರಾನಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮಾದಕ ದ್ರವ್ಯ ಪ್ರಕರಣದಲ್ಲಿ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿನ ಕಾರ್ಯವಿಧಾನದ ಲೋಪಗಳ ಸರಣಿಯನ್ನು ಹೈಕೋರ್ಟ್ ಎತ್ತಿ ತೋರಿಸಿದ್ದು, ಮೊದಲ ಆರೋಪಿ ಮತ್ತು ಉದ್ಯಮಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ನಟಿ ಸಂಜನಾ ಗಲ್ರಾನಿ (ಆರೋಪಿ ನಂ. 14) ಮತ್ತು ಖಾಸಗಿ ಕಂಪನಿ ಉದ್ಯೋಗಿ ಆದಿತ್ಯ ಅಗರ್ವಾಲ್ (ಆರೋಪಿ ನಂ.22) ಅವರ ಎಫ್‌ಐಆರ್ ರದ್ದು ಮಾಡಿದೆ.
ಡ್ರಗ್ಸ್ ಕೇಸ್‌ನಲ್ಲಿ ಆರೋಪಿಗಳಾಗಿದ್ದಾರೆ ಎಂದು ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಏಪ್ರಿಲ್ ಮತ್ತು ಸೆಪ್ಟೆಂಬರ್ 2020 ರ ನಡುವೆ ಹಲವರ ಬಂಧನವಾಗಿತ್ತು. ನಟಿಯರನ್ನು ಸೇರಿಸಿ 27 ಮಂದಿಯನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಈಗ ಎಫ್‌ಐಆರ್ ರದ್ದುಗೊಂಡಿದ್ದು, ನಟಿ ನಿಟ್ಟುಸಿರು ಬಿಟ್ಟಿದ್ದಾರೆ.
2020 ರ ಸೆಪ್ಟೆಂಬರ್ ತಿಂಗಳಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಜಾಮೀನು ಸಿಕ್ಕಿತ್ತು. ಬಳಿಕ ಎಫ್‌ಐಆರ್ ರದ್ದು ಕೋರಿ ನಟಿ ಸಂಜನಾ ಹಾಗೂ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ ಜೂನ್ 24ರಂದು ಎಫ್‌ಐಆರ್ ರದ್ದುಗೊಳಿಸಿದೆ.
ಆರೋಪಪಟ್ಟಿಯಲ್ಲಿ (ಏಪ್ರಿಲ್ ಮತ್ತು ಸೆಪ್ಟೆಂಬರ್ 2020 ರ ನಡುವೆ) ಉಲ್ಲೇಖಿಸಲಾದ ಅವಧಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಯಾವುದೇ ವಸ್ತುವನ್ನು ವಶಪಡಿಸಿಕೊಂಡಿಲದಲ ಎಂದು ನ್ಯಾಯಾಲಯವು ಹೇಳಿದೆ. ನಟಿ ಸಂಜನಾ ಗಲ್ರಾನಿ ಮತ್ತು ಆದಿತ್ಯ ಅಗರ್ವಾಲ್ ವಿರುದ್ಧದ ಆರೋಪಗಳು ಐದು ವರ್ಷಗಳಿಗಿಂತ ಹೆಚ್ಚು ಹಳೆಯವು. ಅದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್‌ಗಳ ಅಗತ್ಯವಿದೆ ಎಂದು ಹೇಳಿದೆ. ಆರೋಪಿಗಳನ್ನು ಬಂಧಿಸುವ ಸಮಯದಲ್ಲಿ ಅವರಿಂದ ಯಾವುದೇ ಡ್ರಗ್ಸ್ ವಶಪಡಿಸಿಕೊಳ್ಳಲಾಗಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿದೆ.
ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 27 ಮಂದಿಯನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಸಿಸಿಬಿಯಿಂದ (CCB) ನಟಿಯರು ಸೇರಿದಂತೆ ಡ್ರಗ್ ಪೆಡ್ಲರ್ ಗಳ ಬಂಧನವಾಗಿತ್ತು. ಶಿವಪ್ರಕಾಶ್, ರಾಗಿಣಿ ಮತ್ತು ಇನ್ನೊಬ್ಬ ಆರೋಪಿಗಳು ಆಯೋಜಿಸಿದ್ದ ಪಾರ್ಟಿಗಳಲ್ಲಿ ಎಕ್ಸ್‌ಟಾಸಿ ಮಾತ್ರೆಗಳಂತಹ ನಿಷೇಧಿತ ವಸ್ತುಗಳನ್ನು ಸೇವಿಸಿದ ಮತ್ತು ಇತರರನ್ನು ಸೇವಿಸುವಂತೆ ಪ್ರಚೋದಿಸಿದ ಆರೋಪವನ್ನು ಇವರುಗಳ ಮೇಲೆ ಹೊರಿಸಲಾಗಿತ್ತು.
2020ರ ಆಗಸ್ಟ್ 26ರಂದು ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಮಾಹಿತಿ ಮೇರೆಗೆ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಅಪಾರ ಪ್ರಮಾಣದ ಮಾದಕ ವಸುಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಹಲವು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ಇದು ಸ್ಯಾಂಡಲ್‌ವುಡ್‌ಗೂ ಲಿಂಕ್ ಆಗಿತ್ತು.
ನಟಿ ಸಂಜನಾ ಮತ್ತು ಆದಿತ್ಯ ಅಗರ್ವಾಲ್ ಅವರು 2017 ಮತ್ತು 2018 ರಲ್ಲಿ ಆಯೋಜಿಸಲಾದ ಪಾರ್ಟಿಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿ, ಇತರರಿಗೆ ಹಂಚಿದ್ದರು ಎನ್ನುವ ಆರೋಪವಿದೆ. ಇನ್ನು, 2022 ರ ಜನವರಿ 17 ರಂದು ಕೂಡ ಪೊಲೀಸರ ಕಡೆಯಿಂದ ಇದೇ ರೀತಿಯ ಅಸಮರ್ಪಕತೆಯನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್ ಸಮಾಜವಾದಿ ವೀರೇಂದ್ರ ಖನ್ನಾ ವಿರುದ್ಧದ ಕೇಸ್ ರದ್ದುಗೊಳಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
