ಬೆಂಗಳೂರು:
ಕರ್ನಾಟಕದ ವಿಜಯಪುರ ಜಿಲ್ಲೆ ತೆಲಗಿ ಗ್ರಾಮದ ಸಂಜಯಕುಮಾರ ಎಂಬ ಯುವಕನಿಗೆ ಪ್ರತಿಷ್ಠಿತ ಸಿವೈಸಿಎನ್ ಇಂಡಿಯಾ ಸಂಸ್ಥೆ ಯುವ ನಾಯಕನಾಗಿ ಆಯ್ಕೆ ಮಾಡಿದೆ.
ಯುನಿಸೇಫ್ ನ ಯು -ರಿಪೋರ್ಟ್ ಇಂಡಿಯಾ ರಾಯಭಾರಿ, ನೆಹರೂ ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಸೇರಿ ಅನೇಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಯುವ ಸಬಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯುವ ಸಂಘಟಕ, ಚಿಂತಕ ಹಾಗೂ ಪತ್ರಕರ್ತ ಸಂಜಯಕುಮಾರ ಬಿರಾದಾರ ಈಗ ಪ್ರತಿಷ್ಠಿತ ಕಾಮನ್‌ವೆಲ್ತ್ ಯೂಥ್ ಕ್ಲೈಮೇಟ್ ಚೇಂಜ್ ನೆಟವರ್ಕ್ ಇಂಡಿಯಾದ ಯೂಥ್ ಲೀಡರ್ ಆಗಿ ನೇಮಕಗೊಂಡಿದ್ದಾರೆ. ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಸುಚಿತ್ ಶಿಂಧೆ ನೇಮಕಾತಿ ಆದೇಶ ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ವಿಷಯವಾಗಿ ಯುವಕರಲ್ಲಿ ಜಾಗೃತಿ ಸೇರಿದಂತೆ ಅನೇಕ ಕಾರ್ಯ ಚಟುವಟಿಕೆಗಳನ್ನು ದೇಶದಾದ್ಯಂತ ಸಂಘಟಿಸುವಲ್ಲಿ ಮುಂಚೂಣಿ ಪಾತ್ರ ವಹಿಸುವಂತೆ ಸಂಜಯಕುಮಾರ ಅವರಿಗೆ ಕಾರ್ಯಾದೇಶ ನೀಡಲಾಗಿದೆ.
ಯುವಜನತೆ ಬದಲಾವಣೆ ಹರಿಕಾರರು. ಹವಮಾನ ಬದಲಾವಣೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಯುವ ಶಕ್ತಿಯೇ ಪರಿಹಾರ. ಹೀಗಾಗಿ ಯುವ ಸಂಪನ್ಮೂಲ ಯಾವ ರೀತಿ ಹವಾಮಾನ ಬದಲಾವಣೆಯ ಸವಾಲು ಎದುರಿಸಲಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹಿರಿಯರ ಮಾರ್ಗದರ್ಶನ, ಸಲಹೆಯಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಸಂಜಯ ಕುಮಾರ ಬಿರಾದಾರ ತಿಳಿಸಿದ್ದಾರೆ.








