ನವದೆಹಲಿ:
ಫೆಬ್ರವರಿ 5 ರಂದು ನಡೆದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಲಿದ್ದು, ಅದಕ್ಕು ಮುನ್ನವೇ ಬಿಜೆಪಿ ನಮ್ಮ ಪಕ್ಷದ ಏಳು ಅಭ್ಯರ್ಥಿಗಳನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಗುರುವಾರ ಆರೋಪಿಸಿದ್ದಾರೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಎಎಪಿ ಶಾಸಕರಿಗೆ ಭಾರತೀಯ ಜನತಾ ಪಕ್ಷದ ನಾಯಕರು ಫೋನ್ ಕರೆ ಮಾಡಿ, ಕೇಸರಿ ಪಕ್ಷಕ್ಕೆ ಸೇರಲು ತಲಾ 15 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದರು.
“ಕೆಲವರಿಗೆ ಮುಖಾಮುಖಿ ಸಭೆಗಳಲ್ಲಿ ದುಡ್ಡಿನ ಆಮಿಷ ಒಡ್ಡಲಾಗಿದೆ. ಇದು ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ ಮತ್ತು ಅದಕ್ಕಾಗಿಯೇ ಅದು ಇಂತಹ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಆಪ್ ರಾಜ್ಯಸಭಾ ಸದಸ್ಯ ಹೇಳಿದ್ದಾರೆ. ಸಿಂಗ್ ಅವರ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ಆರೋಪಗಳನ್ನು ಹಿಂಪಡಯಬೇಕು ಮತ್ತು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಬುಧವಾರ ಮತದಾನ ನಡೆದಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
![](https://prajapragathi.com/wp-content/uploads/2024/04/sanjay-singh.gif)