ಬೆಂಗಳೂರು :
ನಟ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಭೌತಿಕವಾಗಿ ಇಲ್ಲದಿದ್ದರೂ ಕೂಡ ಫ್ಯಾನ್ಸ್ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ. ಇಂದು (ಮಾರ್ಚ್ 14) ಪುನೀತ್ ನಟನೆಯ ‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಬಂದು ಸಿನಿಮಾ ನೋಡುತ್ತಿದ್ದಾರೆ.
ಪುನೀತ್ ಜೊತೆ ಹೆಚ್ಚು ಆಪ್ತತೆ ಹೊಂದಿದ್ದ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಕೂಡ ‘ಅಪ್ಪು’ ಚಿತ್ರ ನೋಡಲು ಬಂದಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಬಯೋಪಿಕ್ ಮಾಡುವ ಕುರಿತು ಸಂತೋಷ್ ಆನಂದ್ರಾಮ್ ಮಾತನಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಜೀವನದ ಕುರಿತು ಸಿನಿಮಾ ಮಾಡುವ ಆಲೋಚನೆ ಸಂತೋಷ್ ಆನಂದ್ರಾಮ್ ಅವರಿಗೆ ಇದೆ. ಆ ಕುರಿತು ಅವರು ವಿವರ ಹಂಚಿಕೊಂಡಿದ್ದಾರೆ. ‘ಅವರ ಜೊತೆ ನಾನು ಮಾಡಿದ 2 ಸಿನಿಮಾಗಳು ಹಿಟ್ ಆದವು. ನನ್ನ ಬರವಣಿಗೆಯಲ್ಲಿ ಅಪ್ಪು ಅವರನ್ನು ಬಣ್ಣಿಸಿದ ಖುಷಿ ನನಗೆ ಇದೆ. ನಾನು ಇರುವವರೆಗೂ ನನ್ನ ಬರವಣಿಗೆ ಅವರ ಕುರಿತು ಇದ್ದೇ ಇರುತ್ತದೆ. ಅವರ ಬಗ್ಗೆ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಯಾವಾಗಲೂ ಕೇಳುತ್ತಾರೆ’ ಎಂದಿದ್ದಾರೆ ಸಂತೋಷ್ ಆನಂದ್ರಾಮ್.
‘ಇಂದು ಎಐ ಟೆಕ್ನಾಲಜಿ ಇದೆ. ಮುಂದಿನ ದಿನಗಳಲ್ಲಿ ಆ ದೇವರು ಅವಕಾಶ ಕೊಟ್ಟರೆ, ಅಪ್ಪು ಅವರ ಚರಿತ್ರೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ನಾನು ಮಾಡಬೇಕು ಎಂಬುದನ್ನು ಈಗ ತುಂಬ ಗಂಭೀರವಾಗಿ ಪರಿಗಣಿಸಿದ್ದೇನೆ. ಹೊಂಬಾಳೆ ಫಿಲ್ಮ್ಸ್ ಮೂಲಕ ನಾನು ಮತ್ತು ಪುನೀತ್ ಅವರು 5 ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಆಗಿತ್ತು. ಮಾಡಿದ್ದರೆ ರೆಕಾರ್ಡ್ ಆಗುತ್ತಿತ್ತು. ಮೂರು ಮತ್ತು ನಾಲ್ಕನೇ ಸಿನಿಮಾಗೆ ಕಮಿಟ್ ಕೂಡ ಆಗಿದ್ದೆವು. ಆದರೆ ದೇವರ ಆಟ ಬೇರೆಯೇ ಇತ್ತು’ ಎಂದು ಸಂತೋಷ್ ಆನಂದ್ರಾಮ್ ಹೇಳಿದ್ದಾರೆ.
