ಇ-ಕ್ರಿಕೆಟ್​ ಲೀಗ್​ನಲ್ಲಿ ಮುಂಬೈ ತಂಡ ಖರೀದಿಸಿದ ಸಾರಾ ತೆಂಡೂಲ್ಕರ್

ಮುಂಬಯಿ:

     ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್‌  ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ನಲ್ಲಿ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಎರಡನೇ ಆವೃತ್ತಿಗೂ ಮುಂಚಿತವಾಗಿ (ಜಿಇಪಿಎಲ್​) ಮುಂಬೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಸಚಿನ್​ ಪುತ್ರಿಯೂ ಕ್ರಿಕೆಟ್​ ವಿಡಿಯೊ ಗೇಮ್​ ಲೀಗ್​ ಮೂಲಕ ಮುಂಬೈ ಫ್ರಾಂಚೈಸಿ ಜತೆ ಸಂಬಂಧ ಮುಂದುವರಿಸಿದ್ದಾರೆ. 2024ರಲ್ಲಿ ಆರಂಭಗೊಂಡ ಜಿಇಪಿಎಲ್​ ಒಟ್ಟು 3.05 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿದೆ. ಇದೀಗ ಟೂರ್ನಿಯ 2ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದ್ದು, 9 ಲಕ್ಷಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

    ‘ಜಿಇಪಿಎಲ್​ನಲ್ಲಿ ಮುಂಬೈ ಫ್ರಾಂಚೈಸಿಯ ಒಡತಿಯಾಗಿರುವುದರಿಂದ ಕನಸೊಂದು ನನಸಾದಂತಾಗಿದೆ. ಕ್ರಿಕೆಟ್​ ನಮ್ಮ ಕುಟುಂಬದ ಪ್ರಮುಖ ಭಾಗ. ಮುಂಬೈ ನಗರದ ಜತೆಗಿನ ನನ್ನ ಪ್ರೀತಿ ಆಟದೊಂದಿಗೆ ಬೆರೆಯುತ್ತಿದೆ. ಪ್ರತಿಭಾನ್ವಿತ ತಂಡವನ್ನು ಕಟ್ಟಲು ಮತ್ತು ಎಲ್ಲರಿಗೂ ಸ್ಫೂರ್ತಿ ತುಂಬುವ ಮತ್ತು ಮನರಂಜನೆ ನೀಡುವ ಇ-ಸ್ಪೋರ್ಟ್ಸ್​ ತಂಡವನ್ನು ರೂಪಿಸಲು ಉತ್ಸುಕಳಾಗಿದ್ದೇನೆ’ ಎಂದು ಸಾರಾ ಹೇಳಿದ್ದಾರೆ. ಕಳೆದ ವರ್ಷ ಸಾರಾ ತೆಂಡೂಲ್ಕರ್  ಅವರು ʼಸಚಿನ್ ತೆಂಡೂಲ್ಕರ್ ಫೌಂಡೇಶನ್‌ಗೆʼ  ನಿರ್ದೇಶಕಿಯಾಗಿ ಸೇರ್ಪಡೆಗೊಂಡಿದ್ದರು.

    ಇತ್ತೀಚೆಗೆ, ಸಾರಾ ಅವರು ಉದಯಪುರದ ಹಳ್ಳಿಯೊಂದಕ್ಕೆ ತಾಯಿ ಅಂಜಲಿ ತೆಂಡೂಲ್ಕರ್ ಜತೆ ಭೇಟಿ ನೀಡಿ ಅಲ್ಲಿನ ಹಿಂದುಳಿದ ಸಮುದಾಯದ ಮಕ್ಕಳ ಜತೆ ಸಮಯ ಕಳೆದಿದ್ದರು. ಇದರ ಅನುಭವವನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೊಂದು ಅರ್ಥಪೂರ್ಣ ಅನುಭವವಾಗಿದೆ. ಹಿಂದುಳಿದ ಸಮುದಾಯಗಳಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ಚಿಕಿತ್ಸಾಲಯಗಳನ್ನು ಸ್ಥಾಪಿಸಿ ಚಿಕ್ಕ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರದ ಜತೆಗೆ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯʼ ಎಂದು ಹೇಳಿದ್ದರು. ತಂದೆಯಂತೆ ಮಗಳು ಕೂಡ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

    ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.