ನವದೆಹಲಿ:
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲಿನಲ್ಲಿದ್ದ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗೆ ಎರಡು ವರ್ಷಗಳ ನಂತರ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ವೈದ್ಯಕೀಯ ಕಾರಣಗಳಿಗಾಗಿ ಮೇ 26, 2023 ರಂದು ಸುಪ್ರೀಂಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.
ಈ ವರ್ಷದ ಮಾರ್ಚ್ ನಲ್ಲಿ ಜಾಮೀನು ಕೋರಿಕೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರ ಅವರು ತಿಹಾರ್ ಜೈಲಿಗೆ ಮರಳಿದ್ದರು. ಜೈನ್ ಅವರನ್ನು ಮೇ 30, 2022 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.ಇಂದಿನ ವಿಚಾರಣೆ ವೇಳೆಯಲ್ಲಿ ವಿಳಂಬ ಮತ್ತು ಅವರ ದೀರ್ಘ ಸೆರೆವಾಸ ವನ್ನು ನ್ಯಾಯಾಲಯ ಉಲ್ಲೇಖಿಸಿದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ, ರೂ. 50,000 ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರು ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರು ಮಾಡಿದರು.
ನಾಲ್ಕು ಕಂಪನಿಗಳೊಂದಿಗೆ ಅಕ್ರಮವಾಗಿ ಹಣ ಪಡೆದ ಆರೋಪದ ಮೇರೆಗೆ ಮೇ 30, 2022 ರಂದು ಜಾರಿ ನಿರ್ದೇಶನಾಲಯ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು. ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017ರಲ್ಲಿ ಜೈನ್ ವಿರುದ್ಧ ಸಿಬಿಐ ದಾಖಲಿಸಿದ ಎಫ್ ಐಆರ್ ಆಧಾರದ ಮೇಲೆ ಜೈನ್ ಅವರನ್ನು ಬಂಧಿಸಲಾಗಿತ್ತು. ಸತ್ಯೇಂದ್ರ ಜೈನ್ ಅವರು ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆದ ಮೂರನೇ ಎಎಪಿ ನಾಯಕರಾಗಿದ್ದಾರೆ.