ಶಾಸಕ ಸತೀಶ್‌ ಸೈಲ್‌ ವೈದ್ಯಕೀಯ ಜಾಮೀನು ನ.20ರವರೆಗೆ ವಿಸ್ತರಣೆ

ಬೆಂಗಳೂರು

       ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಆರೋಪಕ್ಕೆ  ಸಂಬಂಧಿಸಿ ಇಡಿ ದಾಖಲಿಸಿರುವ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌  ಅವರಿಗೆ ನೀಡಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ಮತ್ತೆ ವಿಸ್ತರಣೆಯಾಗಿದೆ. ನ.20ರವರೆಗೆ ಜಾಮೀನು ವಿಸ್ತರಿಸಿ ಹೈಕೋರ್ಟ್‌ ಆದೇಶಿಸಿದೆ.

     ವಿಚಾರಣೆ ವೇಳೆ ಸತೀಶ್ ಸೈಲ್ ಆರೋಗ್ಯ ಸ್ಥಿತಿ ಬಗ್ಗೆ ಸ್ವತಂತ್ರ ಪರಿಶೀಲನೆ ನಡೆಸಲಾಗಿದ್ದು, ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದೆ ಎಂದು ಇಡಿ ಪರ ಎಎಸ್‌ಜಿ ಅರವಿಂದ್ ಕಾಮತ್ ಹೈಕೋರ್ಟ್‌ಗೆ ಮಾಹಿತಿ ನೀಡಿದರು.

     ಈ ವೇಳೆ ಸತೀಶ್ ಸೈಲ್‌ರ ವೈದ್ಯಕೀಯ ದಾಖಲೆಗಳನ್ನು ಒದಗಿಸಲಾಗುವುದು. ಲಿವರ್ ಕಸಿಯ ಅಗತ್ಯವಿದೆ ಎಂಬ ವೈದ್ಯಕೀಯ ವರದಿ ಇದೆ ಎಂದು ಹೈಕೋರ್ಟ್‌ಗೆ ಸತೀಶ್ ಸೈಲ್ ಪರ ವಕೀಲರು ಮಾಹಿತಿ ನೀಡಿದರು. ನ.15 ರಂದು ಬೆಳಗ್ಗೆ 11.30ಕ್ಕೆ ಆಸ್ಪತ್ರೆಗೆ ಸತೀಶ್ ಸೈಲ್‌ಗೆ ಹಾಜರಾಗಲು ಹೈಕೋರ್ಟ್ ಸೂಚನೆ ನೀಡಿದ್ದು, ಬಳಿಕ ನವೆಂಬರ್ 20ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿ ಆದೇಶ ಹೋರಡಿಸಿದೆ.

      ನವೆಂಬರ್‌ 7ರಂದು ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲಾ ಆರೋಪಿಗಳೂ ಹಾಜರಿರುವಾಗ ಮೊದಲ ಆರೋಪಿಯಾದ ಸತೀಶ್‌ ಸೈಲ್‌ ಗೈರನ್ನು ಮನ್ನಿಸಲಾಗದು. ಹೀಗಾಗಿ, ಸತೀಶ್ ಸೈಲ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದಿದ್ದ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಜೂರು ಮಾಡಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ರದ್ದುಪಡಿಸಿತ್ತು. ಹೀಗಾಗಿ, ಸೈಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಜಾಮೀನು ಮತ್ತೆ ವಿಸ್ತರಣೆಯಾಗಿದೆ.

       ಇನ್ನು ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ 64 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಗೋವಾದ ವಾಸ್ಕೋಡಗಾಮಾದ ‘ಅವರ್ ಲೇಡಿ ಮರ್ಸಸ್’ ವಾಣಿಜ್ಯ ಸಂಕೀರ್ಣ, ದಕ್ಷಿಣ ಗೋವಾದ ಮರ್ಮಗೋವಾ ತಾಲೂಕಿನ ವಿವಿಧೆಡೆ ಇರುವ 16,850 ಚದರ ಮೀಟರ್ ಅಳತೆಯ ಕೃಷಿ ಜಮೀನುಗಳು, 12,500 ಚದರ ಮೀಟರ್ ಅಳತೆಯ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಸ್ಥಿರಾಸ್ತಿಗಳ ಮಾರ್ಗದರ್ಶಿ ಮೌಲ್ಯವೇ ₹21 ಕೋಟಿಯಷ್ಟಾಗುತ್ತದೆ ಎಂದು ಇ.ಡಿ ತಿಳಿಸಿತ್ತು.

         ಬೇಲೆಕೇರಿ ಬಂದರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ವಶಕ್ಕೆ ಪಡೆದು ಸಂಗ್ರಹಿಸಿದ್ದ 5 ಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರಿನಲ್ಲಿ, 1.54 ಲಕ್ಷ ಟನ್‌ಗಳಷ್ಟು ಅದಿರನ್ನು ಸತೀಶ್ ಸೈಲ್ ಅವರ ಒಡೆತನದ ಎಸ್‌ಎಂಎಸ್‌ಪಿಎಲ್ ಕಂಪನಿಯು ಚೀನಾಕ್ಕೆ ರಫ್ತು ಮಾಡಿತ್ತು. ಎಂವಿ ಕೊಲಂಬಿಯ ಮತ್ತು ಎಂವಿ ಮ್ಯಾಡರಿನ್ ಎಂಬ ಹಡಗುಗಳ ಮೂಲಕ ಈ ಅದಿರನ್ನು ಸಾಗಿಸಲಾಗಿತ್ತು ಎಂದು ವಿವರಿಸಿತ್ತು. ಲ್ಲಿ ಬೇರೆಯದ್ದೇ ಕಂಪನಿಗೆ ಅದಿರನ್ನು ಮಾರಾಟ ಮಾಡಲಾಗಿತ್ತು ಎಂದು ಮಾಹಿತಿ ನೀಡಿತ್ತು.

Recent Articles

spot_img

Related Stories

Share via
Copy link