ಕನ್ನಡ ಮಾತಾಡೋದೇ ಇಲ್ಲʼ ಎಂದ ಎಸ್‌ಬಿಐ ಅಧಿಕಾರಿ,….!

ಬೆಂಗಳೂರು

     ಕರ್ನಾಟಕಕ್ಕೆ  ಬಂದು ಇಲ್ಲಿನ ಅನ್ನ- ನೀರು ಸೇವಿಸಿದರೂ ಕನ್ನಡದ ಬಗ್ಗೆ  ಒಂದಿಷ್ಟೂ ಪ್ರೀತಿ- ಸಹನೆ ಇಲ್ಲದ ಉತ್ತರ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಇನ್ನೊಂದು ಘಟನೆಯ ಮೂಲಕ ಇದು ರುಜುವಾತಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌‌  ಮ್ಯಾನೇಜರ್ ಒಬ್ಬರು, ಕನ್ನಡ ಮಾತನಾಡಲ್ಲ, ಇದು ಇಂಡಿಯಾ. ನಾನು ಹಿಂದಿಯನ್ನೇ ಮಾತನಾಡುವುದು ಎಂದು ಉಡಾಫೆಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಮಾತ್ರವಲ್ಲ, ನಾನೆಂದಿಗೂ ಕನ್ನಡ ಮಾತನಾಡಲ್ಲ ಎಂದು ಕನ್ನಡಿಗರನ್ನು ಕೆರಳಿಸುವಂತೆ ಪ್ರತಿಕ್ರಿಯೆ ನೀಡಿರುವ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದೆ.

      ಕನ್ನಡಿಗರು ಈ ವಿಡಿಯೋ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಕರವೇ ಸಂಘಟನೆ ಬ್ಯಾಂಕ್ ಸಿಬ್ಬಂದಿ ಭಾಷಾ‌ ತಾರತಮ್ಯ ವಿರೋಧಿಸಿ ಬುಧವಾರ (ಮೇ 22) ಪ್ರತಿಭಟನೆ ಕರೆ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆ ನಗರದ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಪ್ರಧಾನ ಕಚೇರಿ ಮುಂಭಾಗ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸುವುದಾಗಿ ಕರೆ ನೀಡಿದೆ. ಅಲ್ಲದೇ ಚಂದಾಪುರದ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಬ್ಯಾಂಕ್‌‌ಗೂ ಮುತ್ತಿಗೆ ಮಾಡುವುದಾಗಿ ಕರೆ ಕೊಟ್ಟಿದೆ. ಕರವೇ ಅಧ್ಯಕ್ಷ‌ ನಾರಾಯಣ ಗೌಡರ ನೇತೃತ್ವದಲ್ಲಿ ನಾಳೆ ಎರಡು ಕಡೆ ಪ್ರತಿಭಟನೆಗೆ ಕರೆ ನೀಡಲಾಗಿದೆ.

     ’ಕರ್ನಾಟಕದ ಜನತೆಯ ಆತ್ಮಗೌರವಕ್ಕೆ ಧಕ್ಕೆ ತರುವಂತೆ ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಸಿಬ್ಬಂದಿಯೊಬ್ಬರು ಕನ್ನಡದಲ್ಲಿ ವ್ಯವಹರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದು, “ನಾನು ಕನ್ನಡ ಮಾತನಾಡುವುದಿಲ್ಲ ಹಿಂದಿಯಲ್ಲೇ ಮಾತನಾಡುತ್ತೇನೆ” ಎಂದು ಉದ್ದಟತನದಿಂದ ವರ್ತಿಸಿರುವ ಘಟನೆ ನಡೆದಿದೆ. ಇಂತಹ ಘಟನೆಗಳು ಕೇವಲ ಚಂದಾಪುರಕ್ಕೆ ಸೀಮಿತವಾಗಿಲ್ಲ; ರಾಜ್ಯದಾದ್ಯಂತ ಎಸ್ಬಿಐ ಶಾಖೆಗಳಲ್ಲಿ ಕನ್ನಡ ಬಾರದ ಕನ್ನಡಿಗರ ಭಾಷೆಯನ್ನು ಅಗೌರವಿಸುವ ಸಿಬ್ಬಂದಿಯಿಂದ ಗ್ರಾಹಕರು ತೀವ್ರ ತೊಂದರೆಗೊಳಗಾಗುತ್ತಿದ್ದಾರೆ. ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ದಿನಾಂಕ 21-5-2025ರಂದು ಬೆಳಿಗ್ಗೆ 11 ಗಂಟೆಗೆ ಏಕಕಾಲಕ್ಕೆ ಎರಡು ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಳ್ಳಲಿದೆ’ ಎಂದು ಬರೆಯಲಾಗಿದೆ. 

     ಚಂದಾಪುರದ ಸೂರ್ಯಸಿಟಿಯ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತಾಡಲ್ಲ ಎಂದು ಉಡಾಫೆ ವರ್ತನೆ ತೋರಿದ್ದಾರೆ. ಕನ್ನಡಿಗರನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಕನ್ನಡ ಮಾತಾಡು ಎಂದ ಗ್ರಾಹಕನಿಗೆ ಹಿಂದಿ ಮಾತಾಡ್ತೇನೆ, ನಾನು ಕನ್ನಡ ಮಾತನಾಡಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಕನ್ನಡ ಮಾತನಾಡಿ ಎಂದಿದ್ದಕ್ಕೆ ಇದು ಇಂಡಿಯಾ ನಾನು ಹಿಂದಿಯನ್ನೇ ಮಾತನಾಡುತ್ತೇನೆ ಎಂದು ಬ್ಯಾಂಕ್ ಮ್ಯಾನೇಜರ್ ಉಡಾಫೆಯಾಗಿ ಮಾತನಾಡಿರುವ ವಿಡಿಯೋವನ್ನು ಗ್ರಾಹಕರು ಚಿತ್ರೀಕರಿಸಿ ಅದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link