ನವದೆಹಲಿ:
ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಕೋಲ್ಕತ ನೈಟ್‌ರೈಡರ್ಸ್ ತಂಡಗಳ ನಡುವೆ ಮಾರ್ಚ್ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದೊಂದಿಗೆ ಐಪಿಎಲ್ 15ನೇ ಆವೃತ್ತಿಗೆ ಚಾಲನೆ ದೊರೆಯಲಿದೆ. ನಿರೀಕ್ಷೆಯಂತೆಯೇ ಕಳೆದ ವರ್ಷದ ಫೈನಲಿಸ್ಟ್ ತಂಡಗಳೇ ಈ ಸಲ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಆರ್‌ಸಿಬಿ ತಂಡ ಮಾರ್ಚ್ 27ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ, ಮೊಹಾಲಿ ಟೆಸ್ಟ್ ಮುಗಿದ ಬೆನ್ನಲ್ಲೇ ಬಿಡುಗಡೆಗೊಳಿಸಿದೆ.
ಮುಂಬೈನ 3 (ವಾಂಖೆಡೆ, ಡಿವೈ ಪಾಟೀಲ್, ಬ್ರಬೋರ್ನ್) ಮತ್ತು ಪುಣೆಯ 1 (ಎಂಸಿಎ) ಮೈದಾನದಲ್ಲಿ ಎಲ್ಲ 70 ಲೀಗ್ ಪಂದ್ಯಗಳು ನಡೆಯಲಿವೆ. ಮೇ 29ರಂದು ನಡೆಯಲಿರುವ ಫೈನಲ್ ಸಹಿತ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ತಡವಾಗಿ ಪ್ರಕಟಗೊಳ್ಳಲಿದೆ.
ಒಟ್ಟು 12 ಡಬಲ್ ಹೆಡರ್ಸ್ (ಒಂದೇ ದಿನ 2 ಪಂದ್ಯ) ನಡೆಯಲಿವೆ. ಲಖನೌ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಈ ಬಾರಿ ಟೂರ್ನಿಗೆ ಸೇರ್ಪಡೆಗೊಂಡಿರುವ 2 ಹೊಸ ತಂಡಗಳಾಗಿವೆ. ಟೂರ್ನಿ ಒಟ್ಟಾರೆ 65 ದಿನಗಳ ಕಾಲ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
