ತುಮಕೂರು :
ಖಾಸಗಿ ಶಾಲೆಗಳ ಸ್ಕೂಲ್ ಫೀಸ್ ಯಾವಾಗ್ಲೂ ತುಂಬಾನೇ ದುಬಾರಿಯಾಗಿರುತ್ತದೆ ಅನ್ನೋ ವಿಚಾರ ಎಲ್ರಿಗೂ ಗೊತ್ತೇ ಇದೆ. ಆದ್ರೆ ವರ್ಷದಿಂದ ವರ್ಷಕ್ಕೆ ಫ್ರೈವೆಟ್ ಸ್ಕೂಲ್ ಫೀಸ್‌ಗಳು ಗಗನಕ್ಕೇರುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯಂತಿರುವ ಪೋಸ್ಟ್ ಒಂದು ಇದೀಗ ಎಲ್ಲಡೆ ಹರಿದಾಡುತ್ತಿದ್ದು, ಇಲ್ಲೊಂದು ಖಾಸಗಿ ಶಾಲೆ ಬರೀ ನರ್ಸರಿ ಮತ್ತು ಎಲ್.ಕೆ.ಜಿಯ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬರೋಬ್ಬರಿ 1.5 ಲಕ್ಷ ರೂ. ಶಾಲಾ ಶುಲ್ಕವನ್ನು ವಿಧಿಸಿದೆ. ಈ ದುಬಾರಿ ಶುಲ್ಕ ವಿವರದ ಫೋಟೋ ಇದೀಗ ವೈರಲ್ ಆಗುತ್ತಿದ್ದು, ಇದನ್ನೆಲ್ಲಾ ನೋಡ್ತಿದ್ರೆ ಸರ್ಕಾರಿ ಶಾಲೆಗಳೇ ಬೆಸ್ಟ್ ಅನ್ಸುತ್ತೆ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.
2024-25 ರ ನರ್ಸರಿ ಮತ್ತು ಜ್ಯೂನಿಯರ್ ಕೆಜಿ ಬ್ಯಾಚ್‌ನ ಶಾಲಾ ಶುಲ್ಕ ರಶೀದಿಯ ಫೋಟೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತ ಪೋಸ್ಟ್ ಒಂದನ್ನು ಬೆಂಗಳೂರಿನ ವೈದ್ಯರಾದ ಡಾ. ಜಗದೀಶ್ ಚತುರ್ವೇದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕೇವಲ ಪೇರೆಂಟ್ ಓರಿಯೆಂಟೇಷನ್‌ಗೆ 8400 ಫೀಸ್ ಅಂತೆ, ಇದನ್ನೆಲ್ಲಾ ನೋಡಿ ಈಗ ನಾನು ಒಂದು ಶಾಲೆಯನ್ನು ತೆರೆಯಬೇಕೆಂದು ಪ್ಲಾನ್ ಮಾಡ್ತಿದ್ದೇನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ಶಾಲಾ ಶುಲ್ಕ ವಿವರದ ಫೋಟೋದಲ್ಲಿ ಅಡ್ಮಿಶನ್ ಫೀಸ್, ಪೇರೆಂಟ್ ಓರಿಯೆಂಟೇಷನ್ ಫೀಸ್, ವಾರ್ಷಿಕ ಶುಲ್ಕ ಎಲ್ಲವನ್ನು ಸೇರಿಸಿ ಬರೋಬ್ಬರಿ 1,51,656 ರೂ. ಶಾಲಾ ಶುಲ್ಕವನ್ನು ವಿಧಿಸಿರುವ ದೃಶ್ಯವನ್ನು ಕಾಣಬಹುದು.
ಅಕ್ಟೋಬರ್ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 98 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯ ಅಗತ್ಯವಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಹಣ ಲೂಟಿ ಮಾಡಲು ಸರ್ಕಾರಗಳೇ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶವನ್ನು ನೀಡಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಲ್ವಾ ಸ್ವಾಮಿ ಎಲ್.ಕೆ.ಜಿ ಮಕ್ಕಳಿಗೆ ಇಷ್ಟೆಲ್ಲಾ ಫೀಸ್ ವಿಧಿಸುವ ಅವಶ್ಯಕತೆ ಇದ್ಯಾʼ ಎಂದು ಹೇಳಿದ್ದಾರೆ.