ಬೆಂಗಳೂರು:
ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಕೂಡ, ಕಳೆದ ವರ್ಷ ಸ್ವೀಕರಿಸಿದ 3,318 ತುರ್ತು ಕರೆಗಳಲ್ಲಿ 3,978 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (KSFES) ವಿಶೇಷ ಘಟಕವಾದ ಎಸ್ ಡಿಆರ್ ಎಫ್, ಪ್ರವಾಹ ಪರಿಹಾರ, ಭೂಕುಸಿತ, ವಾಹನಗಳ ಸಿಲುಕುವಿಕೆ ಮತ್ತು ಇತರ ನೈಸರ್ಗಿಕ ವಿಕೋಪಗಳು ಸೇರಿದಂತೆ ವಿಪತ್ತು ಪ್ರತಿಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಜ್ಯಾದ್ಯಂತ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಕಾರ್ಯವನ್ನು ಈ ಪಡೆ ಹೊಂದಿದೆ.
ಕೆಎಸ್ ಎಫ್ ಇಎಸ್ ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಕರ್ನಾಟಕವು ಪ್ರಸ್ತುತ ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರಗಿ ಮತ್ತು ದಾವಣಗೆರೆಯಲ್ಲಿ ಐದು ಎಸ್ ಡಿಆರ್ ಎಫ್ ಕಂಪನಿಗಳನ್ನು ಹೊಂದಿದೆ. ನಿರ್ವಹಣಾ ಪಡೆ ಕೇವಲ 137 ಖಾಯಂ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚುವರಿಯಾಗಿ 79 ಮಾಜಿ ಸೇನಾ ಸಿಬ್ಬಂದಿ ತಂಡದಲ್ಲಿ ಸೇವೆ ಸಲ್ಲಿಸುತ್ತಾರೆ.
ಕೆಎಸ್ ಎಫ್ ಇಎಸ್ ಮತ್ತು ಎಸ್ ಡಿಆರ್ ಎಫ್ ನಿರ್ದೇಶಕ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿ ಜೊತೆ ಮಾತನಾಡಿ, ಎಸ್ ಡಿಆರ್ ಎಫ್ ರಾಜ್ಯಾದ್ಯಂತ ರಕ್ಷಣಾ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಂಗಳೂರು ಮತ್ತು ಉಡುಪಿಯಿಂದ ಅತಿ ಹೆಚ್ಚು ರಕ್ಷಣಾ ಕರೆಗಳು ಬರುತ್ತವೆ ಎಂದರು. ಕೊಳವೆಬಾವಿಗಳಿಗೆ ಬಿದ್ದ ಮಕ್ಕಳನ್ನು ತಂಡಗಳು ಯಶಸ್ವಿಯಾಗಿ ರಕ್ಷಿಸಿವೆ. ಪ್ರಮುಖ ವಾಹನ ಅಪಘಾತಗಳಿಗೆ ಪ್ರತಿಕ್ರಿಯಿಸಿವೆ ಮತ್ತು ಬೆಂಕಿ ಅಪಘಾತಗಳು ಮತ್ತು ಕಟ್ಟಡ ಕುಸಿತ ವೇಳೆ ಸಹಾಯ ಮಾಡಿವೆ.
ನಿರ್ಣಾಯಕ ಸಂದರ್ಭಗಳಲ್ಲಿ ಲೈಫ್ ಜಾಕೆಟ್‌ಗಳು ಮತ್ತು ಹಗ್ಗಗಳಂತಹ ಜೀವ ಉಳಿಸುವ ಸಾಧನಗಳ ಬಳಕೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ತಂಡವು ನಡೆಸುತ್ತದೆ ಎಂದು ಅವರು ಹೇಳಿದರು.ಕರಾವಳಿ ಪ್ರದೇಶಗಳಲ್ಲಿ ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ಗುರಿಯಾಗುವುದರಿಂದ ಎಸ್‌ಡಿಆರ್‌ಎಫ್ ಕಂಪನಿಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ಹೇಳುತ್ತಾರೆ.
ವಿಪತ್ತು ನಿರ್ವಹಣೆಯಲ್ಲಿ ಪಡೆಯ ದಕ್ಷತೆಯನ್ನು ಹೆಚ್ಚಿಸಲು ಸಿಬ್ಬಂದಿ ನೇಮಕಾತಿ ಹೆಚ್ಚಿಸಬೇಕಾಗುತ್ತದೆ. ಉತ್ತಮ ಸಂಪನ್ಮೂಲಗಳ ಮೂಲಕ ಸಿಬ್ಬಂದಿ ಕೊರತೆಯನ್ನು ಪರಿಹರಿಸಬೇಕಾಗಿದೆ. ಮುಂಗಾರು ಋತು ಸಮೀಪಿಸುತ್ತಿದ್ದಂತೆ, ಇಲಾಖೆಯು ಮೂಲಸೌಕರ್ಯವನ್ನು ಸುಧಾರಿಸುವ ಮತ್ತು ಹೆಚ್ಚುವರಿ ಮಾನವಶಕ್ತಿಯನ್ನು ನಿಯೋಜಿಸುವತ್ತ ಗಮನಹರಿಸಬೇಕು ಎಂದು ಹೇಳಿದರು, ಹೆಚ್ಚುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಸಂಖ್ಯೆಯು ಭವಿಷ್ಯದ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆಯನ್ನು ಸುಧಾರಿಸಲು ಸುಸಜ್ಜಿತ ವಿಪತ್ತು ಪ್ರತಿಕ್ರಿಯೆ ತಂಡದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
