ಕೋಲ್ಕತ್ತಾ:
ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಅವರು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರ ವಿರುದ್ಧ ಶುಕ್ರವಾರ ಲೋಕಪಾಲ್‌ಗೆ ದೂರು ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದೆ, ಪುರಿ-ಬುಚ್ ವಿರುದ್ಧ ಲೋಕಪಾಲ್ ಗೆ ವಿದ್ಯುನ್ಮಾನವಾಗಿ ಮತ್ತು ಭೌತಿಕವಾಗಿ ದೂರನ್ನು ನೀಡಲಾಗಿದೆ. ಲೋಕಪಾಲ್ 30 ದಿನಗಳ ಒಳಗಾಗಿ ಅದನ್ನು ಪ್ರಾಥಮಿಕ ತನಿಖೆಗಾಗಿ ಸಿಬಿಐ ಅಥವಾ ಇಡಿಗೆ ಉಲ್ಲೇಖಿಸಬೇಕು. ನಂತರ ಎಫ್ ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು. ಪ್ರತಿಯೊಂದು ಘಟಕಕ್ಕೂ ಸಮನ್ಸ್ ನೀಡಬೇಕು, ಈ ಕುರಿತ ಎಲ್ಲಾ ಲಿಂಕ್ ನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮೂರು ಪುಟಗಳ ಪತ್ರದಲ್ಲಿ, ಮಹುವಾ ಮೊಯಿತ್ರಾ ಅವರು, ಈ ಪ್ರಕರಣ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಕೋಟಿಗಟ್ಟಲೆ ಹೂಡಿಕೆದಾರರ ಹಿತಾಸಕ್ತಿಗಳಿಗೆ ಸಂಬಂಧಿಸಿದೆ. ಈ ಬಗ್ಗೆ ತನಿಖೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಕಳೆದ ವರ್ಷ ಬಹಿರಂಗಪಡಿಸಿದ್ದ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ 2024ರ ಆಗಸ್ಟ್ 10ರಂದು ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಸ್ಪೋಟಕ ವರದಿಯನ್ನು ಬಹಿರಂಗಪಡಿಸಿತ್ತು.
ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ(ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.ಈ ಆರೋಪವನ್ನು SEBI ಮುಖ್ಯಸ್ಥರು “ಆಧಾರರಹಿತ” ಎಂದು ಹೇಳಿದ್ದಾರೆ. ಅಲ್ಲದೆ ಅದಾನಿ ಗ್ರೂಪ್ ಸಹ, ತಾನು ಬುಚ್ ಜೊತೆಗೆ ಯಾವುದೇ ವಾಣಿಜ್ಯ ಸಂಬಂಧವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.