ಬೆಂಗಳೂರು:
ತೀವ್ರ ಕಗ್ಗಂಟಾಗಿ ಉಳಿದಿರುವ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರವು ಇದೀಗ ಮತ್ತೊಂದು ಹಂತಕ್ಕೆ ತಲುಪಿದಂತಿದೆ. ಮೊದಲಿಗೆ ಮೂರು ಜಾಗಗಳನ್ನು ಗುರುತಿಸಿದ ರಾಜ್ಯ ಸರ್ಕಾರವು ಇನ್ನೇನು ಜಾಗ ಫೈನಲ್ ಆಯ್ತು ಎಂದೇ ಹೇಳಿಕೊಂಡಿತ್ತು. ಆದರೆ ಇದಕ್ಕೆ ಭಾರಿ ವಿರೋಧ ಎದುರಾಗಿದ್ದರಿಂದ ಮುಂದಿನ ನಡೆ ಕುತೂಹಲ ಮೂಡಿಸಿತ್ತು. ಮತ್ತೊಂದೆಡೆ ಮಾಗಡಿ ಭಾಗದಲ್ಲೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಯಾರಿ ನಡೆದಿದ್ದು, ಅಲ್ಲಿಯೂ ರೈತರಿಂದ ವಿರೋಧ ಎದುರಾಗುತ್ತಿದೆ. ಇದೀಗ ತುಮಕೂರು ಭಾಗದಲ್ಲೇ ಹೊಸ ಏರ್ಪೋರ್ಟ್ ನಿರ್ಮಾಣವಾಗುವುದು ದಟ್ಟವಾದಂತಿದೆ. ಕೇಂದ್ರ ಸಚಿವ ವಿ.ಸೋಮಣ್ಣ ನೀಡಿರುವ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ.
ಈ ಹಿಂದೆ ಕನಕಪುರ ರಸ್ತೆ ಹಾಗೂ ಕುಣಿಗಲ್ ಬಳಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವುದು ಬೇಡ ಎಂದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ವಿರೋಧಿಸಿದ್ದರು. ಇದಕ್ಕೆ ಬಿಜೆಪಿ ನಾಯಕ ಕೇಂದ್ರ ಸಚಿವ ವಿ.ಸೋಮಣ್ಣ ಕೂಡ ಧ್ವನಿಗೂಡಿಸಿದ್ದರು. ರಾಜ್ಯ ಸರ್ಕಾರ ಏನೇ ಮಾಡಲಿ, ನಾವಂತೂ ತುಮಕೂರಿನಲ್ಲೇ ಏರ್ಪೋರ್ಟ್ ನಿರ್ಮಾಣ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದರು.
ಇತ್ತೀಚೆಗೆ ಮತ್ತೆ ಮಾಧ್ಯಮಗಳ ಮುಂದೆ ಮಾತನಾಡಿರುವ ಸಚಿವ ವಿ.ಸೋಮಣ್ಣ ಅವರು ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ದೊರೆಯಲಿದೆ ಎಂದು ಭರವಸೆ ನೀಡಿದರು. ತುಮಕೂರು ಮಂದಿಗೆ ಕೇಂದ್ರದ ಎಲ್ಲ ಸೌಲಭ್ಯಗಳು ದೊರೆಯಬೇಕು. ಒಂದು ತಿಂಗಳಲ್ಲಿ ತುಮಕೂರು ಜನರಿಗೆ ದೊಡ್ಡ ಸಿಹಿ ಸುದ್ದಿ ಕೊಡುತ್ತೇವೆ. ಅದು ಇಡೀ ತುಮಕೂರಿನ ಚಿತ್ರಣವನ್ನೇ ಬದಲಾವಣೆ ಮಾಡಲಿದ್ದು, ತುಮಕೂರು ಎರಡನೇ ಬೆಂಗಳೂರಾಗಿ ಬೆಳೆಯುವುದು ಪಕ್ಕಾ ಎನ್ನುವ ಮೂಲಕ ಪರೋಕ್ಷವಾಗಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರಿನ ಶಿರಾದಲ್ಲಿ ಸ್ಥಾಪಿಸಿದರೆ, ಸಾಕಷ್ಟು ಅನುಕೂಲವಾಗಲಿದೆ ಎಂದು ಕಾಂಗ್ರೆಸ್ನ ಟಿಬಿ ಜಯಚಂದ್ರ ಹೇಳಿದ್ದು, ಇದಕ್ಕೆ ನನಗೂ ಒಪ್ಪಿಗೆ ಇದೆ ಎಂದಿದ್ದರು. ಎರಡನೇ ವಿಮಾನ ನಿಲ್ದಾಣದ ಸಂಬಂಧ 34 ಶಾಸಕರು ಸೋಮಣ್ಣ ಅವರಿಗೆ ಮನವಿ ಪತ್ರ ನೀಡಿದ್ದಾಗಿ ಹೇಳಿದ್ದರು. ಆ ಮನವಿ ಪತ್ರವನ್ನು ಸೋಮಣ್ಣ ಅವರು ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೆ ಸಲ್ಲಿಸಿದ್ದರು.
ಶಿರಾದಲ್ಲೇ ಏರ್ಪೋರ್ಟ್ ಮಾಡಬೇಕು ಅಂತೇನಿಲ್ಲ, ಬುಕ್ಕಾಪಟ್ಟಣ ಎಂಬ ಪ್ರದೇಶ ಕೂಡ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಅಲ್ಲಿ ಸುಮಾರು 4,000 ಎಕರೆಯಷ್ಟು ಜಾಗ ಚೆನ್ನಾಗಿದೆ. ಅಲ್ಲಿ ಯಾವುದೇ ಒಂದು ಬೆಟ್ಟ ಗುಡ್ಡ ಇಲ್ಲ, ತುಂಬಾ ಒಳ್ಳೆಯ ಪ್ರೈಮ್ ಲ್ಯಾಂಡ್ ಎಂದಿದ್ದರು. ತುಮಕೂರು ಭಾಗಕ್ಕೆ ಏರ್ಪೋರ್ಟ್ ತರುವ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ತರುತ್ತೇವೆ ಎಂದಿದ್ದರು. ಈ ಸಂಬಂಧ ನಾನು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಈ ಬಗ್ಗೆ ಕೇಂದ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡವನ್ನು ತುಮಕೂರಿಗೂ ಬರುವಂತೆ ಮಾಡುವ ಕೆಲಸಕ್ಕೆ ನಾನು ಒತ್ತಡ ಹಾಕಲೇಬೇಕು. ಇದು ನನ್ನ ಕರ್ತವ್ಯ ಎಂದ್ದಿದ್ದರು. ಇದೀಗ ಇನ್ನೊಂದು ತಿಂಗಳಲ್ಲಿ ತುಮಕೂರು ಮಂದಿಗೆ ಸಿಹಿಸುದ್ದಿ ನೀಡುವುದಾಗಿ ಅವರು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
