ಭದ್ರತಾ ಸಿಬ್ಬಂದಿ ಕೊಂದು ದರೋಡೆ

ತುಮಕೂರು:

ಭದ್ರತಾ ಸಿಬ್ಬಂದಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲು ಮೀಟಿ ಒಳನುಗ್ಗಿರುವ ದರೋಡೆಕೋರರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲ್ಲೂಕಿನ ನಾಗವಲ್ಲಿಯಲ್ಲಿ ನಡೆದಿದೆ.

ತಾಲ್ಲೂಕಿನ ನಾಗವಲಿಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆ ಪಕ್ಕದಲ್ಲೇ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಕಳ್ಳತನ ನಡೆದಿದೆ.ಹೆಬ್ಬೂರಿನ ನಿವಾಸಿಯಾದ ಬ್ಯಾಂಕ್ ಭದ್ರತಾ ಸಿಬ್ಬಂದಿ ಸಿದ್ದಪ್ಪ (55) ಎಂಬುವರೇ ಕೊಲೆಯಾಗಿರುವ ದುರ್ದೈವಿ.ನಾಗವಲ್ಲಿ ಡಿಸಿಸಿ ಬ್ಯಾಂಕ್ ಆವರಣದಲ್ಲೇ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದರೋಡೆಕೋರರು ನುಗ್ಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಡಿಸಿಸಿ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಸಿದ್ದಪ್ಪ ಅವರು ಕಳ್ಳರಿಗೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕಳ್ಳರ ತಂಡ ಅವರ ಕೈಕಾಲು ತಿರುಚಿ ಉಸಿರುಗಟ್ಟಿಸಿ ಕೊಲೆಗೈದು ಶವವನ್ನು ಶೌಚಾಲಯಕ್ಕೆ ಎಸೆದಿದ್ದಾರೆ ಎನ್ನಲಾಗಿದೆ.

ನಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ, ಒಳಗೆ ನುಗ್ಗಿ ಸೊಸೈಟಿಯೊಳಗಿದ್ದ ಸಿಸಿ ಕ್ಯಾಮರಾವನ್ನು ಒಡೆದು ಹಾಕಿ, ದಾಖಲಾತಿಗಳು, ಇತರ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ತದ ನಂತರ ಲಾಕರ್‍ಗಳನ್ನು ಒಡೆದು ಅದರೊಳಗಿದ್ದ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಹಾಗೂ 2.60 ಲಕ್ಷ ರೂ. ನಗದು ಹಾಗೂ ಕೆಲ ದಾಖಲಾತಿಗಳನ್ನು ಕದ್ದೊಯ್ದಿದ್ದಾರೆ.

ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನ ಸೊಸೈಟಿ ರಜೆ ಇತ್ತು. ಇದನ್ನು ಗಮನಿಸಿದ್ದ ಖತರ್ನಾಕ್ ಕಳ್ಳರು ಈ ಕೃತ್ಯವೆಸಗಿದ್ದಾರೆ. ಸೋಮವಾರ ಬೆಳಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೌಕರರು ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ ಸಂದರ್ಭದಲ್ಲಿ ಈ ಕಳ್ಳತನ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ 13 ವರ್ಷಗಳ ಹಿಂದೆ ನಾಗವಲ್ಲಿ ಡಿಸಿಸಿ ಬ್ಯಾಂಕ್‍ನ ಗೋಡೆ ಕೊರೆದು ಕಳ್ಳತನ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಸಹ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಘಟನೆಯ ಸುದ್ದಿ ತಿಳಿದ ಕೂಡಲೇ ಹೆಬ್ಬೂರು ಪಿಎಸ್‍ಐ ದೇವಿಕಾರಾಣಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್, ಅಡಿಷನಲ್ ಟಿ.ಜೆ. ಉದೇಶ್ ಭೇಟಿ ನೀಡಿ ಪರಿಶೀಲಿಸಿ, ಈ ದರೋಡೆ ಪ್ರಕರಣವನ್ನು ಭೇಧಿಸಲು ವಿಶೇಷ ಪೆÇಲೀಸ್ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಮತ್ತು ಬೆಳರಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ನಾಗವಲ್ಲಿಯಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯನ್ನು ಕೊಲೆಗೈದು ದರೋಡೆ ಮಾಡಿರುವ ಪ್ರಕರಣ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾತ್ರಿ ಗಸ್ತು ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಹೆಚ್ಚಿಸಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ :
ಕುಟುಂಬದಲ್ಲಿ ಬಡತನವಿದ್ದ ಕಾರಣ ಕಳೆದ 7 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಸಿದ್ದಪ್ಪ ಭಾನುವಾರ ರಾತ್ರಿ 8.30 ರ ಸಮಯದಲ್ಲಿ ಕರ್ತವ್ಯಕ್ಕೆ ಬಂದಿದ್ದು, 10 ಗಂಟೆಯಲ್ಲಿ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ ಹಾಗೂ ಮಗನ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link