ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಹೃದಯಾಘಾತದಿಂದ ನಿಧನ; ಸಿಎಂ ಸಂತಾಪ

ಬೆಂಗಳೂರು:

     ಹಿರಿಯ ಪತ್ರಕರ್ತ ದೊಡ್ಡ ಬೊಮ್ಮಯ್ಯ  ಹೃದಯಾಘಾತದಿಂದ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಹುಟ್ಟೂರು ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

   ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಬೆಳಗ್ಗೆ ದೊಡ್ಡ ಬೊಮ್ಮಯ್ಯ ಬೆಂಗಳೂರಿಗೆ ಆಗಮಿಸಿದ್ದರು. ಬಾಗಲೂರಿನ ಮನೆಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದಾರೆ. ಆದರೆ, ಬಸ್ಸಿನಲ್ಲೇ ಬೊಮ್ಮಯ್ಯ ಅವರಿಗೆ ಹೃದಯಘಾತವಾಗಿ ನಿಧನರಾಗಿದ್ದಾರೆ.

   ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದವರಾದ ದೊಡ್ಡ ಬೊಮ್ಮಯ್ಯ ಅವರು ಈ ಮೊದಲು ಸಂಜೆವಾಣಿ ಮತ್ತು ಪ್ರಸ್ತುತ ಇಂದು ಸಂಜೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸಹಾಯಕ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಇವರು, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು. 

   ದೊಡ್ಡ ಬೊಮ್ಮಯ್ಯ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮಯ್ಯ ಅವರ ನಿಧನವಾರ್ತೆ ನೋವುಂಟು ಮಾಡಿದೆ. ಸುದೀರ್ಘ 30 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಪತ್ರಿಕಾ ಧರ್ಮಕ್ಕೆ ನಿಷ್ಠರಾಗಿದ್ದವರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸುದ್ದಿ ಸಂಪಾದಕರಾಗಿ, ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ, ಪ್ರೆಸ್‌‍ ಕ್ಲಬ್‌ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link