ಮುಂಬೈ:
ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನ ಚೇತೋಹಾರಿ ವಹಿವಾಟು ನಡೆಸಿದ್ದು, ವಾರದ ಮೊದಲ ದಿನ ಸೋಮವಾರ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಕುಸಿತದಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಕಳೆದ ಶುಕ್ರವಾರ ವಾರದ ವಹಿವಾಟು ಅಂತ್ಯದ ವೇಳೆ ಭರ್ಜರಿ ಕಮ್ ಬ್ಯಾಕ್ ಮಾಡಿತ್ತು. ಈ ವೇಳೆ ಸೆನ್ಸೆಕ್ಸ್ 759.05 ಅಂಕ ಮತ್ತು ನಿಫ್ಟಿ 216.95 ಅಂಕಗಳ ಏರಿಕೆಯೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿದ್ದವು.
ಇಂದು ಅಂದರೆ ವಾರದ ವಹಿವಾಟಿನ ಆರಂಭಿಕ ದಿನವಾದ ಸೋಮವಾರ ಅದೇ ಪ್ರವೃತ್ತಿಯನ್ನು ಮುಂದುವರೆಸಿರುವ ಸೂಚ್ಯಂಕಗಳು ಏರಿಕೆಯಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.56 ರಿಂದ ಶೇ.0.59ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 445.29 ಅಂಕಗಳ ಏರಿಕೆಯೊಂದಿಗೆ 80,248.08 ಅಂಕಗಳಿಗೆ ಏರಿಕೆಯಾಗಿದೆ. ಇದರೊಂದಿಗೆ ಸೆನ್ಸೆಕ್ಸ್ ಮೊದಲ ಬಾರಿಗೆ ತಿಂಗಳ ಗರಿಷ್ಠ ಮಟ್ಟ ತಲುಪಿದೆ. ಅಂತೆಯೇ ನಿಫ್ಟಿ ಕೂಡ 142.90 ಅಂಕಗಳ ಏರಿಕೆಯೊಂದಿಗೆ 24,274.00 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಲೂಚಿಪ್ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು HDFC ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಅಲ್ಟ್ರಾಟೆಕ್ ಸಿಮೆಂಟ್, JSW ಸ್ಟೀಲ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಟೈಟಾನ್, ಮಾರುತಿ, ಮಹೀಂದ್ರ & ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭಾಂಶ ಗಳಿಸಿದರೆ, NTPC, ಹಿಂದೂಸ್ತಾನ್ ಯೂನಿಲಿವರ್, ಕೋಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಷೇರುಗಳು ನಷ್ಟ ಅನುಭವಿಸಿವೆ.