ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿ: ರಾಜ್ಯ ಸರ್ಕಾರಕ್ಕೆ ಶಾಸಕರ ಆಗ್ರಹ

ಬೆಳಗಾವಿ:

     ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವಂತೆ ಜೆಡಿಎಸ್‌ ಶಾಸಕ ಶರಣಗೌಡ ಕುಂದಕೂರ್ ಅವರು ಆಗ್ರಹಿಸಿದ್ದಾರೆ.ಸದನದಲ್ಲಿ ಮಾತನಾಡಿರುವ ಅವರು, ದಕ್ಷಿಣ ಕರ್ನಾಟಕದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ನನಗೆ ಯಾವುದೇ ರೀತಿಯ ಅಸೂಯೆ ಇಲ್ಲ. ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡದಿರುವುದು ಕಳವಳ ತಂದಿದೆ. ಇಲ್ಲಿನ ಪ್ರಸ್ತುತದ ಸ್ಥಿತಿಗೆ ಜನರು ಹಾಗೂ ಚುನಾಯಿತ ಪ್ರತಿನಿಧಿಗಳು ಎಲ್ಲರೂ ಹೊಣೆಗಾರರಾಗಿರುತ್ತಾರೆಂದು ಹೇಳಿದರು.

    7-8 ಬಾರಿ ಆಯ್ಕೆಯಾದ ಸದಸ್ಯರು ಈ ಪ್ರದೇಶದ ಅಭಿವೃದ್ಧಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ಹಲವು ಬಾರಿ ಆಯ್ಕೆಯಾದ ಸದಸ್ಯರ ಪರಿಸ್ಥಿತಿ ಹೀಗಿದ್ದರೆ, ಮೊದಲ ಬಾರಿಗೆ ಆಯ್ಕೆಯಾದವರ ಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದ್ದಾರೆ,

    ಉತ್ತರ ಕರ್ನಾಟಕಕ್ಕೆ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು, ಕನಿಷ್ಠ ಐದು ವರ್ಷಗಳ ಕಾಲ 1.5 ರಿಂದ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಬೇಕು. ಮಂಡಿಸಲಾದ ಬಜೆಟ್ ಒಂದು ವರ್ಷಕ್ಕೆ ಒಂದೇ ವಿಷಯದ ಮೇಲೆ ಕೇಂದ್ರೀಕರಿಸಬೇಕು. ಮೊದಲ ವರ್ಷ ಶಿಕ್ಷಣದ ಮೇಲೆ ಕೇಂದ್ರೀಕರಿಸಿದರೆ, ನಂತರದ ವರ್ಷಗಳಲ್ಲಿ ಆರೋಗ್ಯ, ನೀರಾವರಿ, ಕುಡಿಯುವ ನೀರು ಮತ್ತು ಮೂಲಸೌಕರ್ಯದ ಮೇಲೆ ಕೇಂದ್ರೀಕರಿಸಬೇಕು. ಇಂತಹ ಕ್ರಮಗಳಿಂದ ಮಾತ್ರ, ಈ ಪ್ರದೇಶದ ಅಭಿವೃದ್ಧಿಯಾಗದ ಸಮಸ್ಯೆಯನ್ನು ಪರಿಹರಿಸಬಹುದು. ಕೈಗಾರಿಕೆ, ಸಣ್ಣ ಪ್ರಮಾಣದ ಕೈಗಾರಿಕೆ, ಐಟಿ-ಬಿಟಿ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರು ಈ ಪ್ರದೇಶದವರೇ ಆಗಿದ್ದರೂ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಶೋಚನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇದೇ ವೇಳೆ ಈ ಪ್ರದೇಶದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ​​ಸಮಸ್ಯೆಯ ಬಗ್ಗೆ ದ್ವನಿ ಎತ್ತಿದ ಮಾಜಿ ಸಚಿವ ಲಕ್ಷ್ಮಣ್ ಸವದಿಯವರು, ಕೇಂದ್ರ ಸರ್ಕಾರದ ನೀತಿಗಳೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

    ಗುಜರಾತ್‌ನಲ್ಲಿ ಶೇ.100, ಉತ್ತರ ಪ್ರದೇಶದಲ್ಲಿ ಶೇ.69 ಮತ್ತು ಮಹಾರಾಷ್ಟ್ರದಲ್ಲಿ ಶೇ.64ರಷ್ಟು ಎಥೆನಾಲ್ ಉತ್ಪಾದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಕರ್ನಾಟಕದಲ್ಲಿ ಕೇವಲ ಶೇ.30ರಷ್ಟು ಮಾತ್ರ ಖರೀದಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಸರ್ಕಾರನವದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುಬೇಕು. ರಾಜ್ಯದಲ್ಲಿ ಉತ್ಪಾದಿಸುವ ಹೆಚ್ಚಿನ ಎಥೆನಾಲ್ ಅನ್ನು ಖರೀದಿಸಲು ಕಂಪನಿಗಳಿಗೆ ಅವಕಾಶ ನೀಡುವಂತೆ ಹಾಗೂ ಸಕ್ಕರೆಯ MSP ಅನ್ನು 41 ರೂ.ಗೆ ಹೆಚ್ಚಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಸಲಹೆ ನೀಡಿದರು. ಇದೇ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅಡಿಯಲ್ಲಿ ನಾಲೆಗಳನ್ನು ನಿರ್ಮಿಸಲು ಭೂಸ್ವಾಧೀನ ಕೈಬಿಟ್ಟು, ಪರ್ಯಾಯ ಯೋಜನೆಯನ್ನು ರೂಪಿಸುವಂತೆ ಸಲಹೆ ನೀಡಿದರು.

    ಕಾಲುವೆಗಳ ಬದಲಾಗಿ, ಆಳವಾದ ಭೂಗತ ಪೈಪ್‌ಲೈನ್ ಮೂಲಕ ನೀರನ್ನು ಹರಿಯಲು ಯೋಜನೆ ರೂಪಿಸಬೇಕು. ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಬೇಕೆಂದು ಹೇಳಿದರು.ನಂತರ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ತೂಕ ಮಾಡುವಲ್ಲಿ ರೈತರು ಮೋಸ ಹೋಗುತ್ತಿರುವ ಬಗ್ಗೆ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಅವರು ಮಾತನಾಡಿದರು.

   ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳಿದ್ದು, ಅಲ್ಲಿ ಡಿಜಿಟಲ್ ವೇ ಬ್ರಿಡ್ಜ್​​ಗಳಿವೆ. ಸರ್ಕಾರದಿಂದಲೇ ಈ ವರ್ಷ 12 ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಕೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡುವ ಯಂತ್ರದಲ್ಲಿ ಮೋಸ ಆಗುತ್ತಿರುವ ಬಗ್ಗೆ ಯಾವುದೇ ರೈತರು ಇದುವರೆಗೂ ದೂರು ಸಲ್ಲಿಸಿಲ್ಲ ಎಂದು ಹೇಳಿದರು.

   ರೈತರು ದೂರು ಸಲ್ಲಿಸಿ, ಬಳಿಕ ಇದು ಸಾಬೀತಾದಲ್ಲಿ ಅಂತಹ ರೈತರಿಗೆ 2 ಲಕ್ಷ ರೂ. ಬಹುಮಾನ ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿತ್ತು. ಇದೀಗ ಈ ಬಹುಮಾನದ ಮೊತ್ತವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಒಂದು ವೇಳೆ ತೂಕದಲ್ಲಿ ಮೋಸ ಮಾಡುವ ಯಾವುದೇ ದೂರು ಸಾಬೀತಾದಲ್ಲಿ, ಅಂತಹ ಕಾರ್ಖಾನೆಯವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ, ನಿಶ್ಚಿತವಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಂತಹ ಕಾರ್ಖಾನೆ ನಿಲ್ಲಿಸುವ ಕ್ರಮಕ್ಕೂ ಮುಂದಾಗುತ್ತೇವೆ. ಕಾರ್ಖಾನೆಗಳ ಒಳಗೆ ನಾವು ಆಧುನಿಕ ತೂಕದ ಯಂತ್ರ ಅಳವಡಿಕೆಗೆ ಮುಂದಾಗಿದ್ದು, ಕಾರ್ಖಾನೆಯವರು ಅನುಮತಿ ನೀಡುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.

   ಬೆಳಗಾವಿ ಶಾಸಕ ಅಭಯ್ ಪಾಟೀಲ್ ಮಾತನಾಡಿ, ಸುವರ್ಣ ಸೌಧ ನಿರ್ಮಾಣದ ಬಗ್ಗೆ ನಗರದ ಜನರು ಸಂತೋಷಪಟ್ಟಿದ್ದರು. ಇಲ್ಲಿ ಸರ್ಕಾರ ಬಂದರೆ ನಗರದ ಚಿತ್ರಣವೇ ಬದಲಾಗುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಅಧಿವೇಶನ ನಡೆದರೂ ಯಾವುದೇ ಬದಲಾವಣೆಗಳು ಕಂಡು ಬರುತ್ತಿಲ್ಲ. ಇದು ಜನರಲ್ಲಿ ನಿರಾಶೆಯನ್ನುಂಟು ಮಾಡಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಪ್ರವಾಸಿ ಟಾಕೀಸಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದರು.

Recent Articles

spot_img

Related Stories

Share via
Copy link