ಚಿತ್ರದುರ್ಗ:
ಎನ್‌ಐಸಿಯಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ ಸರ್ವರ್ ಸ್ಥಳಾಂತರಗೊಂಡಿರುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ತಿಂಗಳ ಪಡಿತರ ವಿತರಣೆಯಲ್ಲಿ ತೊಂದರೆ ಉಂಟಾಗಿದೆ.
ಅವಳಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಪಿಡಿಎಸ್ ಅಂಗಡಿಗಳ ಮುಂದೆ ಫಲಾನುಭವಿಗಳು ದೊಡ್ಡ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಯಿತು. ಹೊಸ ಸರ್ವರ್‌ನಲ್ಲಿ ಡೇಟಾ ಲಭ್ಯವಿಲ್ಲದ ಕಾರಣ ಅವರಲ್ಲಿ ಕೆಲವರು ಬರಿಗೈಯಲ್ಲಿ ಹಿಂತಿರುಗಿದರು. ಇನ್ನು ಕೆಲವರು ಸರ್ವರ್ ವೈಫಲ್ಯದಿಂದ ಪಡಿತರ ಸಿಗದೆ ವಾಪಸ್ಸಾಗಬೇಕಾಯಿತು.
ರಾಷ್ಟ್ರೀಯ ಮಾಹಿತಿ ಕೇಂದ್ರದ ಸರ್ವರ್‌ನಲ್ಲಿ ಸೃಷ್ಟಿಯಾದ ಹಲವು ಸಮಸ್ಯೆಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೊಸ ಸರ್ವರ್ ಅನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್(ಕೆಎಸ್‌ಡಿಸಿ) ಗೆ ಸ್ಥಳಾಂತರಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, ಎರಡು ದಿನಗಳ ಹಿಂದೆ ಎನ್‌ಐಸಿ ಸರ್ವರ್‌ನಿಂದ ಕೆಎಸ್‌ಡಿಸಿ ಸರ್ವರ್‌ಗೆ ದತ್ತಾಂಶ ಬದಲಾವಣೆ ಆರಂಭವಾಗಿದ್ದು, ಇದರಿಂದ ಸಾರ್ವಜನಿಕರು ಪಡಿತರ ಚೀಟಿ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಎರಡರಿಂದ ಮೂರು ದಿನಗಳಲ್ಲಿ ಅದನ್ನು ಸರಿಪಡಿಸಿ ಪಡಿತರ ವಿತರಿಸಲಾಗುವುದು ಎಂದು ಹೇಳಿದ್ದಾರೆ.
NFSA (ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ) ಅಡಿಯಲ್ಲಿ ಪಡಿತರ ವಿತರಣೆ ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರಲಿದೆ. ಪ್ರಸ್ತುತ ಪಡಿತರ ಚೀಟಿದಾರರು ಭಯಪಡುವ ಅಗತ್ಯ ಇಲ್ಲ. ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಚಿತ್ರದುರ್ಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಎನ್‌ಐಸಿ ಸರ್ವರ್ ಸಮಸ್ಯೆಗಳಿಂದ ತುಂಬಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ ಸರ್ವರ್‌ಗೆ ಸ್ಥಳಾಂತರಿಸುತ್ತಿದ್ದೇವೆ. ಇದು ಇಲಾಖೆಗೆ ಸುಲಭವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.
