ಮೊಳಕಾಲ್ಮುರು:
ಕೆಲ ದಿನಗಳಿಂದ ಬಾಳೆಹಣ್ಣಿನ ದರ ತೀವ್ರ ಕುಸಿತವಾಗಿದ್ದು ಜಿಲ್ಲೆಯಲ್ಲಿ ಬಾಳೆ ಬೆಳೆಗಾರರು ನಷ್ಟಕ್ಕೀಡಾಗಿದ್ದಾರೆ.
ನೀರಾವರಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ ಮತ್ತು ಹಣಕಾಸಿನ ಬೆಳೆ ಎಂದು ಗುರುತಿಸಿಕೊಂಡಿರುವ ಬಾಳೆಗೆ ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಬೇಡಿಕೆ ಕುಸಿತದ ಬಿಸಿ ತಟ್ಟಿದೆ.
ಹೊರರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾದ ಕಾರಣದ ರಪ್ತು ಕುಸಿತವಾಗಿದೆ. ಸ್ಥಳೀಯವಾಗಿಯೂ ಅಂಗಡಿಯವರು ಹೆಚ್ಚಿನ ಪ್ರಮಾಣದಲ್ಲಿ ಕೊಳ್ಳಲು ಮುಂದಾಗದಿರುವ ಪರಿಣಾಮವಾಗಿ ದರ ಕುಸಿತ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.
ತಾಲ್ಲೂಕಿನ ಜೆ.ಬಿ. ಹಳ್ಳಿಯ ಬೆಳೆಗಾರ ಸೋಮರೆಡ್ಡಿ ಮಾತನಾಡಿ, ಬಾಳೆಹಣ್ಣು ಫಲಕ್ಕೆ ಬಂದ ನಂತರ ಶೇಖರಣೆ ಮಾಡಲು ಸಾಧ್ಯವಾಗುವುದಿಲ್ಲ. ಮಾರಾಟ ಮಾಡುವುದೊಂದೇ ದಾರಿ. ಕೋವಿಡ್ ಆತಂಕ, ತೀವ್ರ ಪ್ರಮಾಣದ ಚಳಿಯ ವಾತಾವರಣದಿಂದಾಗಿ ಬೇಡಿಕೆ ಕಡಿಮೆಯಾಗಿದೆ. ಸಗಟು ಮಾರಾಟಗಾರರು ಮತ್ತು ಚಿಲ್ಲರೆ ಮಾರಾಟಗಾರರು ಸದ್ಯದ ಅಗತ್ಯಕ್ಕೆ ತಕ್ಕಂತೆ ಮಾತ್ರ ಖರೀದಿ ಮಾಡುತ್ತಿದ್ದಾರೆ’ ಎಂದರು.
‘ಪುಟ್ಟಬಾಳೆ ಪ್ರತಿ ಕೆಜಿಗೆ ₹ 20 ಆಸುಪಾಸಿನಲ್ಲಿ, ಪಚ್ಚೆ ಬಾಳೆ ಪ್ರತಿ ಕೆಜಿಗೆ ₹ 5- ₹ 7 ದರದಲ್ಲಿ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಪುಟ್ಟಬಾಳೆ ₹ 30- ₹ 35, ಪಚ್ಚೆಬಾಳೆ ₹ 12 ದರ ಸಿಕ್ಕಲ್ಲಿ ಲಾಭ ಕಾಣಬಹುದು. ಅಸಲು ಬಾರದಂತಾಗಿದೆ. ನಾನು 4 ಎಕರೆಯಲ್ಲಿ ನಾಟಿ ಮಾಡಿದ್ದು ದರ ಕುಸಿತ ನೋಡಿ ಬೆಳೆ ನಾಶಪಡಿಸಿದ್ದೇನೆ’ ಎಂದರು.
ಚಳ್ಳಕೆರೆಯ ಬಾಳೆಹಣ್ಣಿನ ಸಗಟು ವ್ಯಾಪಾರಿ ಹಾಗೂ ಬೆಳೆಗಾರ ರಾಮದಾಸ್ ಮಾಹಿತಿ ನೀಡಿ, ‘ನಮ್ಮಲ್ಲಿ ಮತ್ತು ನೆರೆಯ ಆಂಧ್ರದಲ್ಲಿ ಬೆಳೆಯುವ ಬಾಳೆಯನ್ನು ಪ್ರಮುಖವಾಗಿ ದೆಹಲಿ, ಮಹಾರಾಷ್ಟ್ರಕ್ಕೆ ರಫ್ತು ಮಾಡಲಾಗುತ್ತದೆ. ಸೀಮಾಂಧ್ರದಲ್ಲಿ ‘ಪ್ರಥಮ ಕಟಿಂಗ್’ನ್ನು ‘ಡೆಲ್ಲಿ ಕಟಿಂಗ್’ ಎಂದೇ ಕರೆಯಲಾಗುತ್ತದೆ. ನಮ್ಮ ಭಾಗದಲ್ಲಿ ಹೆಚ್ಚು ಗುಣಮಟ್ಟದ ಪುಟ್ಟಬಾಳೆ ಬೆಳೆಯಲಾಗುತ್ತಿದ್ದು, ಹೊರಜಿಲ್ಲೆಗಳಿಗೆ ಕಳಿಸಲಾಗುತ್ತಿದೆ. ಈಗ ನಾಟಿ ಹೆಚ್ಚಳವಾಗಿ ಇಳುವರಿ ಹೆಚ್ಚು ಬರುತ್ತಿರುವುದು ಸಹ ದರ ಕುಸಿತಕ್ಕೆ ಒತ್ತು ನೀಡಿದೆ’ ಎಂದು ಹೇಳಿದರು.
‘ಹೊಸಪೇಟೆ ಭಾಗದಲ್ಲಿ ತುಂಗಭದ್ರಾ ನೀರು ಬಳಸಿಕೊಂಡು ಯಥೇಚ್ಛವಾಗಿ ಸೇಲಂ ಬೆಳೆಯಲಾಗುತ್ತಿತ್ತು. ನೆರೆಯ ತಮಿಳುನಾಡಿನಲ್ಲಿ ರಸಬಾಳೆ ಹೆಚ್ಚು ಬೆಳೆಯಲಾಗುತ್ತಿತ್ತು. ಈಗ ಈ ಎರಡೂ ಕಡೆ ಯಾಲಕ್ಕಿ ಬಾಳೆ ಬೆಳೆಯಲಾಗುತ್ತಿದೆ. ಕೂಲಿಯಾಳುಗಳ ಸಮಸ್ಯೆಯಿಂದಾಗಿ ರೈತರು ಬಾಳೆ ಕೃಷಿಯತ್ತ ವಾಲುತ್ತಿರುವುದು ಬೆಳೆಯುವ ಪ್ರಮಾಣದ ಪ್ರದೇಶ ಹೆಚ್ಚಳವಾಗುತ್ತಿದೆ.
ಕೋವಿಡ್ ನಿಂದಾಗಿ ಪ್ರಸ್ತುತ ರಪ್ತು ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಯಾಲಕ್ಕಿ ಉತ್ತಮ ಇಳುವರಿ ಬಂದು ಕೆ.ಜಿ.ಗೆ ₹ 30 ದರ ಸಿಕ್ಕಲ್ಲಿ ಲಾಭ ಕಾಣಬಹುದು. ಸದ್ಯಕ್ಕೆ ಬೆಳೆಗಾರರು ನಷ್ಟದಲ್ಲಿದ್ದಾರೆ’ ಎಂದು ಹೇಳಿದರು.
ನೀರಿನ ಲಭ್ಯತೆ ಹೆಚ್ಚಿರುವುದರಿಂದ ಬಾಳೆ ಕೃಷಿ ಹೆಚ್ಚಳ
‘ಜಿಲ್ಲೆಯು ಬಾಳೆಯ ಕೃಷಿಗೆ ಹೆಸರಾಗಿದೆ. ಇಲ್ಲಿಯ ಪುಟ್ಟಬಾಳೆ, ಯಾಲಕ್ಕಿ ಬಾಳೆ ಹೆಚ್ಚು ಗುಣಮಟ್ಟದ್ದಾಗಿವೆ. ಹೊರ ರಾಜ್ಯಗಳಿಗೆ ಕಳಿಸಲಾಗುತ್ತದೆ. ಈಚಿನ ದಿನಗಳಲ್ಲಿ ಬಾಳೆ ಕೃಷಿ ಹೆಚ್ಚಾಗುತ್ತಿದೆ. ಇದಕ್ಕೆ ನೀರಿನ ಲಭ್ಯತೆ ಸ್ವಲ್ಪ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ. ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲ್ಲೂಕು ಬಾಳೆ ನಾಟಿ ಪ್ರಮಾಣದಲ್ಲಿ ಪ್ರಥಮ ಸ್ಥಾನದಲ್ಲಿದೆ.
ನಂತರ ಸ್ಥಾನಗಳಲ್ಲಿ ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ 1,45,426 ಮೆಟ್ರಕ್ ಟನ್‌ಗಳಷ್ಟು ಬಾಳೆಹಣ್ಣು ಉತ್ಪಾದನೆಯಾಗುವ ಗುರಿ ಹೊಂದಲಾಗಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ. ಆರ್. ವಿರೂಪಾಕ್ಷಪ್ಪ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನಾಟಿ ಪ್ರಮಾಣ (ಹೆಕ್ಟೇರ್‌ಗಳಲ್ಲಿ)
ಹೊಳಲ್ಕೆರೆ ತಾಲ್ಲೂಕು;2,155
ಹಿರಿಯೂರು;1,332
ಹೊಸದುರ್ಗ;810
ಚಿತ್ರದುರ್ಗ;343
ಚಳ್ಳಕೆರೆ;206
ಮೊಳಕಾಲ್ಮುರು;141
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ