ಕೋಲ್ಕತ್ತ:
ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾಜಭವನದ ಮಹಿಳಾ ಸಿಬ್ಬಂದಿ ರಾಜ್ಯಪಾಲರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ ಮಾಡಿರುವ ಮಹಿಳೆ 2019 ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರದಂದು ರಾಜ್ಯಪಾಲರು ತಮ್ಮನ್ನು ಭೇಟಿ ಮಾಡಿ ತಮ್ಮ ಪದೋನ್ನತಿ ಬಗ್ಗೆ ಚರ್ಚೆ ಮಾಡಿದ್ದರು. ಈ ವೇಳೆ ತಮಗೆ ಅಹಿತಕರ ಅನುಭವವಾಗಿದೆ ಎಂದು ಹೇಳಿದ್ದಾರೆ.
ದೂರಿನ ಪ್ರಕಾರ, ಒಂದು ವಾರದ ಹಿಂದೆ ರಾಜ್ಯಪಾಲರು ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಹೇಳಿದ್ದಾರೆ. ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೂ ಮೊದಲು ಮಹಿಳೆ ರಾಜಭವನ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ನಾವು ದೂರು ಸ್ವೀಕರಿಸಿದ್ದೇವೆ, ತನಿಖೆ ನಡೆಸುತ್ತಿದ್ದೇವೆ. ನಾವು ಕಾನೂನು ಇಲಾಖೆಯ ಸಾಂವಿಧಾನಿಕ ತಜ್ಞರೊಂದಿಗೆ ಈ ವಿಷಯದ ಬಗ್ಗೆ ಸಮಾಲೋಚಿಸುತ್ತಿದ್ದೇವೆ. ಮಹಿಳೆಯ ಆರೋಪದ ಪ್ರಕಾರ, ರಾಜಭವನದಲ್ಲಿ ಆಕೆಗೆ ಕಿರುಕುಳ ನೀಡಲಾಗಿದೆ” ಎಂದು ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.