ಬೆಂಗಳೂರು
ʼಶಿಕ್ಷಕರಿಗೆ ನಾಲೆಡ್ಜ್ ಇಲ್ಲʼ ಎಂಬ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಹೇಳಿಕೆಗೆ ಶಿಕ್ಷಕರ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರು, ಶಿಕ್ಷಕರಿಗೆ ನಾಲೆಡ್ಜ್ ಇಲ್ಲ ಎಂಬ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಖಂಡಿಸುತ್ತೇನೆ. ಈ ಹೇಳಿಕೆ ಇಡೀ ಗುರು ಪರಂಪರೆಗೆ ಮಾಡಿರುವ ಅವಮಾನ. ರಾಜ್ಯದ ಶಿಕ್ಷಕರು ಈ ಹೀನ ಹೇಳಿಕೆಯನ್ನು ಖಂಡಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಶಿಕ್ಷಕರಿಗೆ ನಾಲೆಡ್ಜ್ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ರಾಜ್ಯದ ಗುರುಪರಂಪರೆಗೆ ತನ್ನದೇ ಆದ ಇತಿಹಾಸ ಇದೆ. ಈ ನಾಡಿನಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಎಷ್ಟು ಜ್ಞಾನ ಇದೆ, ಎಷ್ಟು ತಿಳಿವಳಿಕೆ ಇದೆ ಎಂದು ಅರ್ಥ ಮಾಡಿಕೊಳ್ಳದೆ, ಈ ರೀತಿ ಅಪ್ರಬುದ್ಧ ಹೇಳಿಕೆ ನೀಡಿರುವುದು ನೋವಿನ ಸಂಗತಿ. ಇದು ಶಿಕ್ಷಕರಿಗೆ ಮಾಡಿರುವ ಘೋರ ಅವಮಾನ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರಿ ನೌಕರರು ಒಂದು ಹಂತಕ್ಕೆ ತಲುಪಬೇಕಾದರೆ ಅವರ ಗುರುಗಳು ಹೊಂದಿದ್ದ ಅಪಾರ ಜ್ಞಾನವೇ ಕಾರಣ. ಶಿಕ್ಷಕರಿಗೆ ನಾಲೆಡ್ಜ್ ಇಲ್ಲ ಎಂದು ಹೇಳಿ, ನಂತರ ಆಡಳಿತಾತ್ಮಕ ಹಾಗೂ ಕಂಪ್ಯೂಟರ್ ಜ್ಞಾನ ಇಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಈ ರಾಜ್ಯದ ಎಲ್ಲ ಶಿಕ್ಷಕರು, ಇಂತಹ ಹೇಳಿಕೆಯನ್ನು ಖಂಡಿಸಬೇಕು. ಈ ರಾಜ್ಯದ ಗುರುಗಳ ಬಗ್ಗೆ ಗೌರವದಿಂದ ಮಾತನಾಡುವುದನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ರೂಢಿ ಮಾಡಿಕೊಳ್ಳಬೇಕು. ಬಹುಶಃ ವರ್ಗಾವಣೆ ಸೇರಿ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಅವರು ಈ ರೀತಿ ವರ್ತನೆ ಮುಂದುವರಿಸುವುದನ್ನು ನೋಡಿದ್ದೇನೆ.
ಇಂತಹ ವರ್ತನೆ ಮುಂದುವರಿದರೆ ಅದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ಸಿ.ಎಸ್.ಷಡಾಕ್ಷರಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕೊಪ್ಪಳದ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ವಿವಾದಿತ ಹೇಳಿಕೆ ನೀಡಿದ್ದರು. ಕಾರ್ಯಕ್ರಮದಲ್ಲಿ HRMS ಹಾಗೂ ವೈದ್ಯಕೀಯ ಭತ್ಯೆ ವಿಚಾರವಾಗಿ ಕೆಲ ಪ್ರಶ್ನೆಗಳನ್ನು ಶಿಕ್ಷಕ ಬಾಳಪ್ಪ ಕಾಳೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಷಡಾಕ್ಷರಿ ಅವರು, ಶಿಕ್ಷಕರಿಗೆ ನಾಲೆಡ್ಜ್ ಇರಲ್ಲ ಎಂದಿದ್ದರು. ಇದಕ್ಕೆ ಶಿಕ್ಷಕ ಬಾಳಪ್ಪ ಕಾಳೆ ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲ ನೌಕರರಿಗೆ ಹೇಳಿ, ಶಿಕ್ಷಕರಿಗೆ ಮಾತ್ರ ಯಾಕೆ ಎಂದು ಬಾಳಪ್ಪ ಕಾಳೆ ಪ್ರಶ್ನಿಸಿದ್ದರು.
ಆಗ ಮಾತನಾಡಿದ ಷಡಾಕ್ಷರಿ ಅವರು, ನಾನು ಹೇಳೋದು ಕೇಳಿಸಿಕೊಳ್ಳಿ, ಅಕಾಡೆಮಿಕ್ ನಾಲೆಡ್ಜ್ ಬೇರೆ, ಅಡ್ಮಿನಿಸ್ಟ್ರೇಷನ್ ನಾಲೆಡ್ಜ್ ಬೇರೆ. ನಾನು ಅಡ್ಮಿನಿಸ್ಟ್ರೇಷನ್ ಬಗ್ಗೆ ಮಾತನಾಡುತ್ತಿರುವುದು. ಕೆಲವರಿಗೆ ಕಂಪ್ಯೂಟರ್ ನಾಲೆಡ್ಜ್ ಇರಲ್ಲ. ನನ್ನ ಬಳಿ ಸಮಸ್ಯೆ ಆಗಿದೆ ಅಂತ ಬಂದವರು ಶಿಕ್ಷಕರೇ ಎಂದು ಷಡಾಕ್ಷರಿ ತಿಳಿಸಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಷಡಾಕ್ಷರಿ ಅವರು ಯಾವ ಉದ್ದೇಶದಿಂದ ಹೇಳಿದರು ಎಂಬುವುದನ್ನು ಬಿಟ್ಟು, ಅವರ ಹೇಳಿಕೆಯನ್ನು ಎಡಿಟ್ ಮಾಡಿ ವಿಡಿಯೋ ಹರಿಬಿಡಲಾಗಿದೆ ಎಂದು ಷಡಾಕ್ಷರಿಯವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.








