ಕರಾಚಿ:
ಪಾಕಿಸ್ತಾನ ಕ್ರಿಕೆಟ್ ನಾಯಕತ್ವದ ಕಥೆಯಲ್ಲಿ ಮತ್ತೊಂದು ನಾಟಕೀಯ ಬೆಳವಣಿಗೆ ನಡೆದಿದ್ದು, ಮೊಹಮ್ಮದ್ ರಿಜ್ವಾನ್ ಬದಲಿಗೆ ವೇಗಿ ಶಾಹೀನ್ ಅಫ್ರಿದಿ ಅವರನ್ನು ಹೊಸ ಏಕದಿನ ನಾಯಕಿಯಾಗಿ ನೇಮಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಘೋಷಣೆ ಮಾಡಿದೆ. ಸೋಮವಾರ ಇಸ್ಲಾಮಾಬಾದ್ನಲ್ಲಿ ನಡೆದ ನಿರ್ಣಾಯಕ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದ್ದು, ವೈಟ್-ಬಾಲ್ ಕೋಚ್ ಮೈಕ್ ಹೆಸ್ಸನ್, ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ ಅಕಿಬ್ ಜಾವೇದ್ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ನವೆಂಬರ್ 4 ರಂದು ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶಾಹೀನ್ ಅಫ್ರಿದಿ ಮೊದಲ ಬಾರಿಗೆ ಪಾಕಿಸ್ತಾನವನ್ನು ಮುನ್ನಡೆಸಲಿದ್ದಾರೆ. 24 ವರ್ಷದ ಎಡಗೈ ವೇಗಿ ಕೊನೆಯ ಬಾರಿಗೆ 2024ರ ಆರಂಭದಲ್ಲಿ ಪಾಕಿಸ್ತಾನವನ್ನು T20I ಗಳಲ್ಲಿ ನಾಯಕತ್ವ ವಹಿಸಿದ್ದರು. ಆದರೆ ಆ ನೇಮಕಾತಿ ಕೇವಲ ಎರಡು ತಿಂಗಳ ನಂತರ ಕೊನೆಗೊಂಡಿತ್ತು.
ಆಕ್ರಮಣಕಾರಿ ಮತ್ತು ಹೊಸ ಚೆಂಡಿನ ಸ್ಥಿರತೆಗೆ ಹೆಸರುವಾಸಿಯಾದ ಶಾಹೀನ್ ಅವರ ನಾಯಕತ್ವ ಶೈಲಿಯು ಪಾಕಿಸ್ತಾನದ ಏಕದಿನ ಕ್ರಿಕೆಟ್ನ ಪ್ರಗತಿಗೆ ಕಾರಣವಾಗಲಿದೆಯಾ ಎಂದು ಕಾದು ನೋಡಬೇಕಿದೆ. ಏಕೆಂದರೆ ಪಾಕಿಸ್ತಾನವು ಕಳೆದ ಕೆಲ ವರ್ಷಗಳಿಂದ ಅಸಮಂಜಸ ಪ್ರದರ್ಶನ ತೋರುತ್ತಿದೆ.
ರಿಜ್ವಾನ್ 2024 ರ ಅಕ್ಟೋಬರ್ನಲ್ಲಿ ಪಾಕಿಸ್ತಾನದ ಏಕದಿನ ಮತ್ತು ಟಿ20ಐ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು, ಆದರೆ ಅವರ ಅವಧಿ ಮಿಶ್ರ ಫಲಿತಾಂಶಗಳನ್ನು ನೀಡಿತು. ಅವರ ನಾಯಕತ್ವದಲ್ಲಿ, ಪಾಕಿಸ್ತಾನ 20 ಏಕದಿನ ಪಂದ್ಯಗಳಲ್ಲಿ 9 ಗೆದ್ದು 11 ಪಂದ್ಯಗಳಲ್ಲಿ ಸೋತು, 45 ರ ಗೆಲುವಿನ ಶೇಕಡಾವಾರು ದಾಖಲಿಸಿತು. ಅವರು ಟಿ20ಐ ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಸಮಯವು ಇನ್ನಷ್ಟು ನಿರಾಶಾದಾಯಕವಾಗಿತ್ತು, ಏಕೆಂದರೆ ಅವರು ನಾಯಕತ್ವ ವಹಿಸಿದ್ದ ನಾಲ್ಕು ಪಂದ್ಯಗಳಲ್ಲಿ ಪಾಕಿಸ್ತಾನ ಸೋಲು ಅನುಭವಿಸಿತು. ಆ ಸೋಲುಗಳ ನಂತರ, ರಿಜ್ವಾನ್ ಅವರನ್ನು ಟಿ20ಐ ನಾಯಕತ್ವದಿಂದ ಕೆಳಗಿಳಿಸುವಂತೆ ಮಾಡಿತ್ತು. ಟಿ20ಗೆ ಸಲ್ಮಾನ್ ಅಲಿ ಆಘಾ ನೂತನ ನಾಯಕನಾಗಿ ಆಯ್ಕೆಯಾದರು.
