ಮುಂಬೈ:
ಚಿತ್ರಪ್ರೇಮಿಗಳಿಗೆ ಹೊಸದೊಂದು ಅನುಭವ ನೀಡಲು ವೇದಿಕೆ ಸಿದ್ಧವಾಗುತ್ತಿದೆ. ಉತ್ತರದ ಸೂಪರ್ ಸ್ಟಾರ್ ಮತ್ತು ದಕ್ಷಿಣದ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಒಂದಾಗುತ್ತಿರುವ ಬಗ್ಗೆ ಗಾಳಿಸುದ್ದಿಯೊಂದು ಹರಡಿದ್ದು, ಫ್ಯಾನ್ಸ್ ನಿರೀಕ್ಷೆ ಈಗಾಗಲೇ ಗರಿಗೆದರಿದೆ. ಟಾಲಿವುಡ್‌ನ ಕಮರ್ಷಿಯಲ್ ಚಿತ್ರಗಳ ನಿರ್ದೇಶಕ ಸುಕುಮಾರ್ ಚಿತ್ರದಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ನಟಿಸಲಿದ್ದಾರೆ ಎಂದು ಮಿಡ್ ಡೇ ವೆಬ್‌ಸೈಟ್ ವರದಿ ಮಾಡಿದೆ. ಒಂದುವೇಳೆ ಈ ಸುದ್ದಿ ನಿಜವೇ ಆದರೆ ಭಾರತೀಯ ಬಾಕ್ಸ್ ಆಫೀಸ್ ಶೇಕ್ ಆಗುವುದು ಖಂಡಿತ ಎಂದು ಸಿನಿಪಂಡಿತರು ಊಹಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷೇ ಹೊರ ಬೀಳಬೇಕಿದೆ. ಅದಾಗಲೇ ಲೆಕ್ಕಾಚಾರ ಆರಂಭವಾಗಿದೆ.
ಕಳೆದ ವರ್ಷ ತೆರೆಕಂಡ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ (Pushpa 2) ಗಲ್ಲಾ ಪೆಟ್ಟಿಗೆಯಲ್ಲಿ 1,642 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ವಿಶೇಷ ಎಂದರೆ ಈ ಚಿತ್ರ ಮೂಲ ತೆಲುಗಿಗಿಂತ ಹಿಂದಿ ಡಬ್‌ನಲ್ಲೇ ಹೆಚ್ಚು ಗಳಿಕೆ ಕಂಡು ಉತ್ತರ ಭಾರತದಲ್ಲಿಯೂ ಹವಾ ಎಬ್ಬಿಸಿದೆ. ಮಾಮೂಲಿ ಕಥೆಯಾದರೂ ಅದನ್ನು ಪಕ್ಕಾ ಕಮರ್ಷಿಯಲ್ ರೀತಿಯಲ್ಲಿ ನಿರೂಪಿಸಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸುಕುಮಾರ್ ನಿರ್ದೇಶನದ ಶಾರುಖ್ ಖಾನ್ ಹಿಂದೆಂದೂ ಕಂಡಿರದ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನಲಾಗಿದೆ. ಗ್ರಾಮೀಣ ಪ್ರದೇಶವೊಂದರಲ್ಲಿ ನಡೆಯುವ ರಾಜಕೀಯದ ಕಥೆಯನ್ನು ಇದು ಒಳಗೊಂಡಿದ್ದು, ಶಾರುಖ್ ನೆಗೆಟಿವ್ ಶೇಡ್ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ʼಪುಷ್ಪʼ ಚಿತ್ರದ ಸರಣಿಯಂತೆಯೇ ಇದು ಪಕ್ಕಾ ಗ್ರಾಮೀಣ ಶೈಲಿಯಲ್ಲಿ ತಯಾರಾಗಲಿದ್ದು, ಶಾರುಖ್ ಔಟ್‌ಲುಕ್ ಸಂಪೂರ್ಣ ಬದಲಾಗಲಿದೆಯಂತೆ. ಜಾತಿ ವ್ಯವಸ್ಥೆ, ಬಡವ-ಶ್ರೀಮಂತ ಮುಂತಾದ ಸಾಮಾಜಿಕ ಪಿಡುಗಳ ಮೇಲೆ ಚಿತ್ರ ಬೆಳಕು ಚೆಲ್ಲಲ್ಲಿದ್ದು, ಕಮರ್ಷಿಯಲ್ ಮಾದರಿಯಲ್ಲಿ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.
ಶಾರುಖ್ ಖಾನ್ ಅವರ ವೃತ್ತಿ ಜೀವನಕ್ಕೆ ಈ ಚಿತ್ರ ಹೊಸದೊಂದು ಆಯಾಮ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಚಿತ್ರದ ಕಥೆ ಕೇಳಿ ಕಿಂಗ್ ಖಾನ್ ಇಂಪ್ರೆಸ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಈ ಚಿತ್ರ ಸದ್ಯದಲ್ಲಂತೂ ಆರಂಭವಾಗುವ ಲಕ್ಷಣಗಳಿಲ್ಲ. ಯಾಕೆಂದರೆ ಸುಕುಮಾರ್ ಮತ್ತು ಶಾರುಖ್ ಖಾನ್ ಈಗಾಗಲೇ ಬೇರೆ ಬೇರೆ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ.
ಸದ್ಯ ಸುಕುಮಾರ್ ರಾಮ್ ಚರಣ್ ಅವರ ಮುಂಬರುವ ಚಿತ್ರ, ʼಪುಷ್ಪ 3ʼ ಮತ್ತು ಇನ್ನೊಂದು ರೊಮ್ಯಾಂಟಿಕ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತ ಶಾರುಖ್ ಖಾನ್ ಅವರು ಮಗಳು ಸುಹಾನಾ ಖಾನ್ ಜತೆ ʼಕಿಂಗ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬಳಿಕ ʼಪಠಾಣ್ 2ʼ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಏನಿದ್ದರೂ 2027ರ ನಂತರವೇ ಸುಕುಮಾರ್-ಶಾರುಖ್ ಖಾನ್ ಚಿತ್ರ ಸೆಟ್ಟೇರಲಿದೆ. ಅದೇನೇ ಇರಲಿ ಈಗಾಗಲೇ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದ್ದಂತೂ ಸತ್ಯ.








