ಬೆಂಗಳೂರು:
ಬೆಂಗಳೂರಿನ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಮುಖ್ಯವಾಗಿ ನಗರದ ನಾಗರಿಕರಿಂದ ಸಾಮೂಹಿಕ ಪ್ರಯತ್ನಗಳು ಅಗತ್ಯವಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶುಕ್ರವಾರ ಅಭಿಪ್ರಾಯಪಟ್ಟರು.‘ನಮ್ಮ ರಸ್ತೆ–2025’ಯಲ್ಲಿ ‘ಪಾಲಿಕೆಯ ಎಂಜಿನಿಯರ್ಗಳ ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಈ ವೇಳೆ ಸರ್ಕಾರದ ಉಪಕ್ರಮವನ್ನು ಶ್ಲಾಘಿಸಿದ ಅವರು, ನಾಗರಿಕರು ಸರ್ಕಾರದೊಂದಿಗೆ ಕೈಜೋಡಿಸಿದರೆ, ನಗರದ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನರು ಬೆಂಗಳೂರಿನ ಹವಾಮಾನವನ್ನು ಬಗ್ಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಅಷ್ಟೇ ನಗರದ ರಸ್ತೆಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ನಗರದ ರಸ್ತೆಗಳ ಕುರಿತು ಸವಿವರವಾದ ಚಿತ್ರವನ್ನು ಇಲ್ಲಿ ಪ್ರಸ್ತಾಪಿಸಿದ್ದು, ಅದರಿಂದ ಸಮಸ್ಯೆಯ ಗಾತ್ರ ಮತ್ತು ಅದಕ್ಕೆ ಪರಿಹಾರಗಳೇನು ಎಂಬುದನ್ನು ನಿಖರವಾಗಿ ನೋಡಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
