ನವದೆಹಲಿ:
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 101 ಮಂದಿ ಇರುವ ರೈತರ ಪ್ರತಿಭಟನಾ ಜಾಥ ಶಂಭು ಗಡಿಯಿಂದ ದೆಹಲಿಯೆಡೆಗೆ ಇಂದು ಪ್ರಾರಂಭವಾಗಿದೆ. ಆದರೆ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಸ್ಥಳದಿಂದ ಕೆಲವೇ ಮೀಟರ್ ಗಳಲ್ಲಿ ರೈತರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದಿದ್ದಾರೆ.
ಹಲವು ಸುತ್ತುಗಳಲ್ಲಿ ನಿಯೋಜಿಸಲಾದ ಬ್ಯಾರಿಕೇಡ್ ಗಳನ್ನು ರೈತರು ತಲುಪುತ್ತಿದ್ದಂತೆಯೇ ಹರ್ಯಾಣ ಭದ್ರತಾ ಸಿಬ್ಬಂದಿಗಳು ಪ್ರತಿಭಟನಾನಿರತರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದಾರೆ. ಹರಿಯಾಣ ಸರ್ಕಾರ ನಿಷೇಧಿತ ಆದೇಶಗಳನ್ನು ವಿಧಿಸಿದೆ ಮತ್ತು ಅಂಬಾಲಾ ಜಿಲ್ಲೆಯ 11 ಹಳ್ಳಿಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಿದೆ, ಮುಂದಿನ ವಾರದವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ
ಫೆಬ್ರವರಿಯಲ್ಲಿ ದೆಹಲಿ ತಲುಪಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್ ಅಡಿಯಲ್ಲಿ ರೈತ ಗುಂಪುಗಳ ಎರಡು ಪ್ರಯತ್ನಗಳನ್ನು ಭದ್ರತಾ ಪಡೆಗಳು ತಡೆದ ನಂತರ ರಾಷ್ಟ್ರ ರಾಜಧಾನಿಯತ್ತ ಮೆರವಣಿಗೆಯನ್ನು ಪ್ರಾರಂಭಿಸುವ ಘೋಷಣೆ ಹೊರಬಿದ್ದಿತ್ತು.
ಅಂಬಾಲಾ-ದೆಹಲಿ ಗಡಿಯ ಹರಿಯಾಣ ಭಾಗದಲ್ಲಿ ಭದ್ರತಾ ಸಿಬ್ಬಂದಿಯ ಭಾರೀ ನಿಯೋಜನೆ ಮಾಡಲಾಗಿದೆ. ಅಂಬಾಲಾ ಜಿಲ್ಲಾಡಳಿತ ಈಗಾಗಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ಆದೇಶವನ್ನು ಹೊರಡಿಸಿದೆ. ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಯಾವುದೇ ಕಾನೂನುಬಾಹಿರ ಸಭೆಯನ್ನು ನಿರ್ಬಂಧಿಸಿದೆ.
ಅಂಬಾಲಾ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶುಕ್ರವಾರ ರಜೆ ಇರಲಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಂಬಲ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಂಭು ಗಡಿ ಬಿಂದು- ರಾಜಪುರ (ಪಂಜಾಬ್)-ಅಂಬಾಲ (ಹರಿಯಾಣ)– ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಬಹುಪದರದ ಬ್ಯಾರಿಕೇಡಿಂಗ್ ಈಗಾಗಲೇ ಜಾರಿಯಲ್ಲಿದೆ. ಶಂಭು ಗಡಿಯಲ್ಲೂ ಜಲಫಿರಂಗಿಗಳನ್ನು ನಿಯೋಜಿಸಲಾಗಿದೆ. ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, 101 ರೈತರನ್ನು ‘ಮರ್ಜೀವರ್ ಗಳೆಂದು’ ಹೇಳಿದ್ದು, ಅವರು ಒಂದು ಕಾರಣಕ್ಕಾಗಿ ಸಾಯಲು ಸಿದ್ಧರಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಮೆರವಣಿಗೆಯನ್ನು “ಶಾಂತಿಯುತ ರೀತಿಯಲ್ಲಿ” ನಡೆಸಲಾಗುವುದು ಎಂದು ಹೇಳಿದ ಪಂಧೇರ್, ಹರ್ಯಾಣ ಆಡಳಿತ ಪಾದಯಾತ್ರೆಯನ್ನು ನಿಷೇಧಿಸಿರುವುದನ್ನು ಕಟುವಾಗಿ ಟೀಕಿಸಿದರು. “ಮೆರವಣಿಗೆ 297ನೇ ದಿನಕ್ಕೆ ಕಾಲಿಟ್ಟಿದ್ದು, ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ ಕಾಲಿಟ್ಟಿದೆ.
ಸುಮಾರು 10 ತಿಂಗಳಾದರೂ ಕೇಂದ್ರದ ಸರ್ಕಾರ ತಮ್ಮ ಒಂದೇ ಒಂದು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಪಂಧರ್ ಹೇಳಿದರು. ರೈತರ ಮೊದಲ ಜಾಥಾವನ್ನು ಸತ್ನಾಮ್ ಸಿಂಗ್ ಪನ್ನು, ಸುರೀಂದರ್ ಸಿಂಗ್ ಚೌತಾಲಾ, ಸುರ್ಜಿತ್ ಸಿಂಗ್ ಫುಲ್ ಮತ್ತು ಬಲ್ಜಿಂದರ್ ಸಿಂಗ್ ನೇತೃತ್ವ ವಹಿಸಲಿದ್ದಾರೆ ರೈತರು ತಮ್ಮೊಂದಿಗೆ ಯಾವುದೇ ಟ್ರ್ಯಾಕ್ಟರ್-ಟ್ರಾಲಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.