ಸಾಂಗ್ಲಿ:
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮೇಲೆ ಈಗಿರುವ ಶೇ.50ರಷ್ಟು ಮಿತಿಯನ್ನು ತೆಗೆದುಹಾಕಬೇಕು ಮತ್ತು ಮೀಸಲಾತಿ ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿ ತರಬೇಕು ಎಂದು ಎನ್‌ಸಿಪಿ(ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರು ಶುಕ್ರವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂದು ಸಾಂಗ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಮೀಸಲಾತಿ ಆಂದೋಲನ ನಡೆಸುತ್ತಿರುವ ಮರಾಠರಿಗೆ ಮೀಸಲಾತಿ ನೀಡುವಾಗ, ಇತರ ಸಮುದಾಯಗಳ ಮೀಸಲಾತಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
“ಪ್ರಸ್ತುತ, ಮೀಸಲಾತಿಯ ಮಿತಿ ಶೇಕಡಾ 50 ಇದೆ. ಆದರೆ ತಮಿಳುನಾಡು ಶೇಕಡಾ 78 ರಷ್ಟು ಮೀಸಲಾತಿ(ವಿವಿಧ ಸಮುದಾಯಗಳಿಗೆ ಕೋಟಾ) ಹೊಂದಬಹುದಾದರೆ, ಮಹಾರಾಷ್ಟ್ರದಲ್ಲಿ ಶೇಕಡಾ 75 ರಷ್ಟು ಮೀಸಲಾತಿ ಏಕೆ ಸಾಧ್ಯವಿಲ್ಲ” ಎಂದು ಶರದ್ ಪವಾರ್ ಪ್ರಶ್ನಿಸಿದರು. ಕೇಂದ್ರವೇ ಮುಂದಾಳತ್ವ ವಹಿಸಿ ಕೋಟಾ ಮಿತಿ ಹೆಚ್ಚಿಸಲು ಸಂವಿಧಾನ ತಿದ್ದುಪಡಿ ತರಬೇಕು. ನಾವು ಈ ತಿದ್ದುಪಡಿಗೆ ಬೆಂಬಲ ನೀಡುತ್ತೇವೆ ಎಂದರು.
ಇದೇ ವೇಳೆ ಮುಂಬರುವ ವಿಧಾನಸಭೆ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ(ಎಂವಿಎ) ನಾಯಕರ ನಡುವೆ ಸೀಟು ಹಂಚಿಕೆ ಮಾತುಕತೆ ಮುಂದಿನ ವಾರ ಮುಂದುವರಿಯಲಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.”ಮಾತುಕತೆಗಳನ್ನು ಆದಷ್ಟು ಬೇಗ ಮುಗಿಸಲು ನಾನು ನಾಯಕರಿಗೆ ಸಲಹೆ ನೀಡುತ್ತೇನೆ, ಇದರಿಂದ ನಾವು ಬದಲಾವಣೆಯನ್ನು ಬಯಸುತ್ತಿರುವ ಜನರ ಬಳಿಗೆ ಹೋಗಬಹುದು” ಎಂದು ಎನ್‌ಸಿಪಿ(ಎಸ್‌ಪಿ) ಅಧ್ಯಕ್ಷರು ಹೇಳಿದ್ದಾರೆ.