ಬೆಳಗಾವಿ
ಬಾಣಂತಿ – ನವಜಾತ ಶಿಶುಗಳ ರಕ್ಷಣೆಗೆ ನಮ್ಮ ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಆರೋಗ್ಯ ಇಲಾಖೆ ಕೂಡ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಪ್ರತಿಯೊಬ್ಬರ ಜೀವವೂ ಮುಖ್ಯ ಎಂಬುದನ್ನು ಮನಗಂಡು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಜತೆ ಶುಕ್ರವಾರ ಬೆಳಗಾವಿಯ ಜಿಲ್ಲಾಸ್ಪತ್ರೆಗೆ (ಬಿಮ್ಸ್) ಭೇಟಿ ನೀಡಿ, ವಿವಿಧ ಘಟಕಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ರಾಜ್ಯದ ಯಾವುದೇ ಭಾಗದಲ್ಲೂ ಈ ರೀತಿಯ ದುರಂತಗಳು ಸಂಭವಿಸಬಾರದು. ಇದನ್ನು ನಿಯಂತ್ರಿಸಲು ಸರ್ಕಾರದ ಮಟ್ಟದಿಂದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಸಂಯಮದಿಂದ ವರ್ತಿಸಬೇಕು. ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಪ್ರತಿಯೊಬ್ಬರ ಜೀವವೂ ಅಮೂಲ್ಯ. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆಗೆ ಸರ್ಕಾರದ ಜೊತೆಗೆ ಪ್ರತಿಪಕ್ಷಗಳು, ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ಸಚಿವರು ತಿಳಿಸಿದರು.
ಬಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಕುಂದುಕೊರತೆ ಉಂಟಾಗದಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗರ್ಭಿಣಿಯರು, ಬಾಣಂತಿಯರು, ಶಿಶುಗಳ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಈಗಾಗಲೇ ಎಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಬಾಣಂತಿಯರು ಹಾಗೂ ಶಿಶುಗಳ ಆರೋಗ್ಯದ ಕಡೆಗೆ ನಿಗಾ ವಹಿಸಿ. ಒಟ್ಟಾರೆಯಾಗಿ ಬಿಮ್ಸ್ ಗೆ ಉತ್ತಮ ಹೆಸರು ತರಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ನಂತರ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡ ಉಭಯ ಸಚಿವರು ಬಳಿಕ ನೂತನ ಕಟ್ಟಡಕ್ಕೂ ಭೇಟಿ ನೀಡಿದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ರಾಜು ಸೇಠ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಸೀನ್, ಬಿಮ್ಸ್ ನಿರ್ದೇಶಕರಾದ ಅಶೋಕ್ ಶೆಟ್ಟಿ, ಅಧೀಕ್ಷಕರಾದ ಡಾ.ವೀರಣ್ಣ ಪಲ್ಲೆದ್, ಮುಖ್ಯ ಆಡಳಿತಾಧಿಕಾರಿ ಸಿದ್ದು ಹುಲ್ಲಳ್ಳಿ, ಡಾ.ವಿಠಲ್ ಶಿಂಧೆ, ಶಿಲ್ಪಾ ವಾಲಿ, ಡಾ.ಸರೋಜ ತಗಡಿ, ಡಾ.ಉಮೇಶ್ ಕುಲಕರ್ಣಿ ಸೇರಿದಂತೆ ಹಲವು ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.








