ಮುಂಬೈ:
ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಜಯಭೇರಿ ಬಾರಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ಮುನ್ಸೂಚನೆ ದೊರೆಯುತ್ತಿದ್ದಂತೆಯೇ ಹೂಡಿಕೆದಾರರಲ್ಲಿ ವ್ಯಾಪಕವಾದ ಆಶಾವಾದ ಹುಟ್ಟಿದ್ದು, ಸೋಮವಾರ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ.
ಇಂದು ಬೆಳಗ್ಗೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2, 777.58 ಅಂಶಗಳಷ್ಟು ಅಥವಾ ಶೇ. 3.75 ರಷ್ಟು ಏರಿಕೆ ಕಂಡು, 76, 738.89 ರಲ್ಲಿ ವಹಿವಾಟು ಆರಂಭಿಸಿದರೆ, ಎನ್ ಎಸ್ ಇ ನಿಫ್ಟಿ 808 ಅಂಶಗಳಷ್ಟು ಏರಿಕೆ ಕಂಡು ಸಾರ್ವಜನಿಕ ದಾಖಲೆಯ 23,338.70ರಲ್ಲಿ ವಹಿವಾಟು ಆರಂಭಿಸಿತು.
ಗಮನಾರ್ಹವಾಗಿ, ನಿಫ್ಟಿ ಸೂಚ್ಯಂಕದಲ್ಲಿನ ಎಲ್ಲಾ 50 ಕಂಪನಿಗಳು ಯಾವುದೇ ಕುಸಿತವಿಲ್ಲದೆ, ಅಪರೂಪದ ಮತ್ತು ದೃಢವಾದ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಗುರುತಿಸುವ ಪ್ರಗತಿ ಕಂಡವು. ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಪವರ್ ಗ್ರಿಡ್, ಶ್ರೀರಾಮ್ ಫೈನಾನ್ಸ್, ಮತ್ತು ಎನ್‌ಟಿಪಿಸಿ, ಪ್ರಮುಖ ಗಳಿಕೆಯೊಂದಿಗೆ ಓಟವನ್ನು ಮುಂದುವರೆಸಿವೆ.