ಮುಂಬೈ
ಅತ್ಯಂತ ಪ್ರಸಿದ್ಧ ಮತ್ತು ಮೌಲ್ಯಯುತ ಮನೆಗಳಲ್ಲಿ ಎರಡನೇ ಸ್ಥಾನದಲ್ಲಿದೆ ನಟ ಶಾರುಖ್ ಖಾನ್ ಅವರ ಮನ್ನತ್, ಮೊದಲ ಸ್ಥಾನದಲ್ಲಿ ಅಂಬಾನಿಯವರ ಅಂಟಿಲಾ ಇದೆ. ಶಾರುಖ್ ಖಾನ್ರ ಮನ್ನತ್ ಮನೆಯ ಈಗಿನ ಸುಮಾರು 300 ಕೋಟಿಗೂ ಹೆಚ್ಚು. ಮನ್ನತ್ ಮನೆ ಬಹಳ ಬೃಹತ್ ಆಗಿದೆ. ಆ ಮನೆಯಲ್ಲಿ ಹಲವು ಕೋಣೆಗಳಿವೆ. ಹೀಗಿದ್ದರೂ ಸಹ ಶಾರುಖ್ ಖಾನ್ ಇತ್ತೀಚೆಗಷ್ಟೆ ಮುಂಬೈನಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಎರಡು ಮನೆಗಳಿಗೆ ಕೊಡುತ್ತಿರುವ ಬಾಡಿಗೆಯ ಮೊತ್ತಕ್ಕೆ ಭಾರಿ ಐಶಾರಾಮಿ ಮನೆಯನ್ನೇ ನಿರ್ಮಾಣ ಮಾಡಿಬಿಡಬಹುದಿತ್ತು.
ಶಾರುಖ್ ಖಾನ್, ಮುಂಬೈನ ಪಾಲಿ ಹಿಲ್ಸ್ ಏರಿಯಾನಲ್ಲಿ ಎರಡು ಡ್ಯೂಪ್ಲೆಕ್ಸ್ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಮೂರು ವರ್ಷಗಳ ಅವಧಿಗೆ ಈ ಮನೆಗಳನ್ನು ಬಾಡಿಗೆಗೆ ಪಡೆದಿರುವ ಶಾರುಖ್ ಖಾನ್ ಈ ಮನೆಗಳಿಗೆ ಮೂರು ವರ್ಷಕ್ಕೆ ಬರೋಬ್ಬರಿ 8.67 ಕೋಟಿ ರೂಪಾಯಿ ಬಾಡಿಗೆ ನೀಡಲಿದ್ದಾರೆ. ಬಾಡಿಗೆ ಕರಾರನ್ನು ನೊಂದಣಿ ಮಾಡಿಸಿದ್ದು, ಶಾರುಖ್ ಖಾನ್, ತಮ್ಮ ಹೆಸರಿನಲ್ಲಿಯೇ ಈ ಎರಡೂ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಪೂಜಾ ಕಸಾ ಹೆಸರಿನ ಬಿಲ್ಡಿಂಗ್ನಲ್ಲಿರುವ ಮೊದಲ ಮತ್ತು ಎರಡನೇ ಫ್ಲೋರ್ನಲ್ಲಿರುವ ಎರಡು ಡ್ಯೂಪ್ಲೆಕ್ಸ್ ಮನೆಯನ್ನು ಶಾರುಖ್ ಖಾನ್ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಈ ಬಿಲ್ಡಿಂಗ್ ಖ್ಯಾತ ನಿರ್ಮಾಪಕರಾದ ಬಗ್ನಾನಿ ಕುಟುಂಬದವರದ್ದು ಎನ್ನಲಾಗುತ್ತಿದೆ.
2024 ರಲ್ಲಿ ಬಿಎಂಸಿ (ಮುಂಬೈ ಪಾಲಿಕೆ)ಗೆ ಪತ್ರ ಬರೆದಿದ್ದ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಈಗಿರುವ ಮನ್ನತ್ ಮನೆಯ ಮೇಲೆ ಎರಡು ಹೆಚ್ಚುವರಿ ಪ್ಲೋರ್ ಕಟ್ಟಲು ಅವಕಾಶ ಕೋರಿದ್ದರು. ಆದರೆ ಆ ಮನವಿಯನ್ನು ಬಿಎಂಸಿ ನಿರಾಕರಿಸಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಈಗ ಬೇರೆಡೆ ಎರಡು ಡ್ಯೂಪ್ಲೆಕ್ಸ್ ಮನೆಗಳನ್ನು ಶಾರುಖ್ ಖಾನ್ ಬಾಡಿಗೆ ಪಡೆದುಕೊಂಡಿದ್ದಾರೆ. ಈ ಎರಡು ಮನೆಗಳು ತಮ್ಮ ಮಕ್ಕಳಿಗಾಗಿ ಶಾರುಖ್ ಖಾನ್ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಈಗಾಗಲೇ ಮುಂಬೈನಲ್ಲಿ ಹಲವು ಮನೆಗಳನ್ನು, ಅಪಾರ್ಟ್ಮೆಂಟ್, ಫ್ಲ್ಯಾಟ್ಗಳನ್ನು ಹೊಂದಿದ್ದಾರೆ. ಶ್ರೀ ಅಮೃತ್ ಸಿಎಚ್ಎಸ್ಎಲ್ ಬಿಲ್ಡಿಂಗ್ನಲ್ಲಿ ಸೀ ಫೇಸ್ ಫ್ಲ್ಯಾಟ್ಗಳನ್ನು ಶಾರುಖ್ ಖಾನ್ ಹೊಂದಿದ್ದಾರೆ. ಇನ್ನೂ ಕೆಲವು ಪ್ರಮುಖ ಏರಿಯಾಗಳಲ್ಲಿ ಶಾರುಖ್ ಖಾನ್ ಮನೆಗಳನ್ನು, ಕಚೇರಿಗಳನ್ನು ಹೊಂದಿದ್ದಾರೆ. ಹಲವು ಫ್ಲ್ಯಾಟ್ ಮತ್ತು ಕಮರ್ಶಿಯಲ್ ಸ್ಪೇಸ್ ಅನ್ನು ಬಾಡಿಗೆಗೆ ಸಹ ನೀಡಿದ್ದಾರೆ.
