ವಕ್ಪ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ : ಶಶಿಕಲಾ ಜೊಲ್ಲೆ

ಬೆಂಗಳೂರು :  

    ರಾಜ್ಯದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

     ಗುರುವಾರ ವಿಕಾಸಸೌಧದಲ್ಲಿ ವಕ್ಫ್ ಮತ್ತು ಹಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದೇನೆ. ರಾಜ್ಯದಲ್ಲಿ ವಕ್ಫ್ 105885 ಎಕರೆ ಜಮೀನು ಗುರುತಿಸಲಾಗಿದೆ. ರಾಜ್ಯದಲ್ಲಿ 32192 ವಕ್ಫ್ ಆಸ್ತಿ ನೊಂದಣಿಯಾಗಿದೆ. 8480 ಎಕರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ರಾಜ್ಯದ 149 ತಾಲೂಕುಗಳ ವಕ್ಫ್ ಆಸ್ತಿ ಗೆಜೆಟ್ ಹೊರಡಿಸಲಾಗಿದೆ. ವಕ್ಫ್ ಇಲಾಖೆಯಲ್ಲಿ 355 ಸಿಬ್ಬಂದಿ ಇದ್ದು ಇನ್ನು 84 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹಜ್ ಯಾತ್ರೆಗೆ ಪ್ರತಿ ವರ್ಷ ಹೋಗಲು ಅವಕಾಶ ಇದೆ. ಸೌದಿ ಅರೇಬಿಯಾಕ್ಕೆ ಹೋಗಲು ಬೇಕಾದ ಅವಶ್ಯ ಮಾಹಿತಿಯನ್ನು ಹಜ್ ಮಂಡಳಿ ಮಾಡುತ್ತದೆ. 1965 ರಲ್ಲಿ 8 ಜನ ಸದಸ್ಯರನ್ನೊಳಗೊಂಡ ಹಜ್ ಸಮಿತಿ ರಚನೆಯಾಗಿದೆ.

      2019-2021 ರಲ್ಲಿ ಕೊವಿಡ್ ಕಾರಣದಿಂದ ಹಜ್ ಯಾತ್ರಿಕರು ಹಜ್ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಹಜ್ ಭವನವನ್ನು ಕೊವಿಡ್ ಕೇರ್ ಸೆಂಟರ್ ಮಾಡಿ ಎಲ್ಲ ಸಮುದಾಯದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ವಕ್ಫ್ ಕಮಿಟಿಯಲ್ಲಿ 105 ಕೋಟಿ ಅನುದಾನ ಇದೆ. ಬಡ ಮುಸ್ಲೀಂ ಸಮುದಾಯದವರಿಗೆ ಶೇ 5 % ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮುಸ್ಲಿಂ ಮಹಿಳೆಯರಿಗೆ ಹೃದಯ ಹಾಗೂ ಕ್ಯಾನ್ಸರ್ ರೋಗ ಚಿಕಿತ್ಸೆಗೆ 1 ಲಕ್ಷ ರೂ. ಸಹಾಯಧನ ನೀಡಲಾಗುವುದು. ವಕ್ಪ್ ಮಂಡಳಿಗೆ ಈ ಸಾರಿ 1.74 ಕೋಟಿ ರೂ. ಅನುದಾನ ನೀಡಲಾಗಿದೆ.

      ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡುವುದು ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ ಎಲ್ಲರಿಗೂ ಯೋಜನೆ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾನಿಪ್ಪಾಡಿ ನೀಡಿರುವ ವರದಿ ಇನ್ನೂ ನೋಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ