ಬೆಂಗಳೂರು
ರಾಜ್ಯದಲ್ಲಿ ಶೀತದಲೆ ಪ್ರಭಾವ ಮುಂದುವರಿದಿದೆ. ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ದಾಖಲಾಗಿದೆ. ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ಶೀತ ಅಲೆಯು ಮೇಲುಗೈ ಸಾಧಿಸಿದೆ. ಇದು ಮುಂದಿನ ಒಂದು ವಾರ ಕಾಲ ಹೀಗೆಯೇ ಇರಲಿದೆ. ಕರಾವಳಿ ಭಾಗದಲ್ಲಿ ತಾಪಮಾನದಲ್ಲಿ ಬದಲಾವಣೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಕರ್ನಾಟಕ ಕೇಂದ್ರವು ಮುನ್ಸೂಚನೆ ನೀಡಿದೆ.
ರಾಜ್ಯಾದ್ಯಂತ ಉಷ್ಣಮಟ್ಟದಲ್ಲಿ ಉತ್ತರ ಪೂರ್ವದಿಂದ ಪೂರ್ವ ದಿಕ್ಕಿಗೆ ತೇವಭರಿತ ಗಾಳಿ ಬೀಸಲಿದೆ. ಒಳನಾಡು ಕರ್ನಾಟಕದ ಎರಡು ಜಿಲ್ಲೆಗಳಾದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಾಮಾನ್ಯ ಕನಿಷ್ಠ ತಾಪಮಾನದಲ್ಲಿ 5-7 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿಕೆ ಆಗಿದೆ. ಇದರಿಂದಾಗಿ ದಟ್ಟ ಮಂಜು ಸಹಿತ ವ್ಯಾಪಕ ಚಳಿ ಕಂಡು ಬಂದಿದೆ. ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಇದೇ ರೀತಿಯ ಗರಿಷ್ಠ ಚಳಿ ಮುಂದುವರಿಯಲಿದ್ದು, ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ಕೊಟ್ಟಿದ್ದಾರೆ.
ಇನ್ನುಳಿದಂತೆ ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ವಿಜಯಪುರ, ಧಾರವಾಡ, ಬೆಳಗಾವಿ, ವಿಜಯನಗರ, ಬಳ್ಳಾರಿ, ದಾವಣಗೆರೆ ವ್ಯಾಪ್ತಿಯಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಲಿದೆ. ಹೀಗಾಗಿ ಬೆಳಗ್ಗೆ ಮತ್ತು ರಾತ್ರಿ ದಟ್ಟ ಮಂಜು ಮತ್ತು ಚಳಿ ವಾತಾವರಣ ನಿರ್ಮಾಣವಾಗಲಿದೆ. ಉಳಿದಂತೆ ರಾಜ್ಯಾದ್ಯಂತ ಇತರ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಈಗಿರುವ ಹವಾಮಾನ ಸ್ಥಿತಿಯೇ ಮುಂದುವರಿಯಲಿದೆ.
ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹಗಲು ಗರಿಷ್ಠ ತಾಪಮಾನ ಕಂಡು ಬರಲಿದ್ದು, ಎಲ್ಲೆಡೆ ಒಣಹವೆ ಕಂಡು ಬರಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ, ಕೆಲವು ಬಡಾವಣೆಗಳಲ್ಲಿ ಬೆಳಗ್ಗೆ ದಟ್ಟ ಮಂಜು ಆವರಿಸುವ ಸಂಭವವಿದೆ. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇದರ ಹೊರತು ಹೆಚ್ಚಿನ ಚಳಿ ಮತ್ತು ಶಿತ ಅಲೆಯ ಎಚ್ಚರಿಕೆ ಸದ್ಯಕ್ಕೆ ಇಲ್ಲ.
ಚಳಿಗಾಲದಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಇನ್‌ಫ್ಲುಯೆಂಜಾ ಕಾಯಿಲೆಗಳು, ಉಸಿರಾಟದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇದೆ. ಶೀತ, ಚಳಿ, ಜ್ವರ, ಕೆಮ್ಮು ಹಾಗೂ ಇನ್ನಿತರ ಉಸಿರಾಟದ ತೊಂದರೆಗಳು ಉಂಟಾಗದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕಣ್ಗಾವಲು ಹೆಚ್ಚಿಸುವ ಜೊತೆಗೆ ವೆಂಟಿಲೇಟರ್‌ಗಳು ಕಾರ್ಯ ನಿರ್ವಹಣೆ, ಎನ್95 ಮಾಸ್ಕ್ ಸೇರಿದಂತೆ ಚಿಕಿತ್ಸೆಗೆ ಬೇಕಾದ ಎಲ್ಲ ಸಾಧನಗಳನ್ನು ಖಚಿತಪಡಿಸಿಕೊಳ್ಳಬೇಕು. ಚಳಿಗಾದಲ್ಲಿ ಆರೋಗ್ಯ ಕಾಳಜಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಎಲ್ಲ ಜಿಲ್ಲೆಗಳಿಗೂ ಮಾರ್ಗಸೂಚಿ ಹೊರಡಿಸಿ ನಿರ್ದೇಶನ ನೀಡಿದೆ.








