ಆರ್ಚರಿಯಲ್ಲಿ ಇತಿಹಾಸ ಸೃಷ್ಟಿಸಿದ ಶೀತಲ್ ದೇವಿ..!

ನವದೆಹಲಿ :

    ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್ ಮುಕ್ತಾಯಗೊಂಡಿದ್ದು, ಇದೀಗ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಸರದಿಯಾಗಿದೆ. ನಿನ್ನೆಯಿಂದ ಆರಂಭವಾಗಿರುವ ಈ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಮೊದಲ ದಿನವೇ ಅಮೋಘ ಆಟ ಪ್ರದರ್ಶಿಸಿದರು. ಅನೇಕ ಕ್ರೀಡಾಪಟುಗಳು ಮೊದಲ ಸುತ್ತನ್ನು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಕೇವಲ 17 ವರ್ಷದ ಬಿಲ್ಲುಗಾರ್ತಿ ಶೀತಲ್ ದೇವಿ ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್​ನಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ.

   ಪ್ಯಾರಿಸ್‌ನಲ್ಲಿ ನಡೆದ ಆರ್ಚರಿ ರ‍್ಯಾಂಕಿಂಗ್ ಸುತ್ತಿನಲ್ಲಿ 720 ಅಂಕಗಳಿಗೆ 703 ಅಂಕಗಳನ್ನು ಕಲೆಹಾಕಿದ ಶೀತಲ್ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಆದರೆ ಸ್ವಲ್ಪ ಸಮಯದ ನಂತರ ಟರ್ಕಿಯಾದ ಓಜ್ನೂರ್ ಗಿರ್ಡಿ ಕ್ಯೂರ್ ಅವರು 704 ಅಂಕಗಳನ್ನು ಕಲೆಹಾಕುವುದರೊಂದಿಗೆ ಶೀತಲ್ ಅವರನ್ನು ಹಿಂದಿಕ್ಕಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಆದಾಗ್ಯೂ ಶೀತಲ್ ಅವರ ಈ ಸಾಧನೆಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಅದಕ್ಕೆ ಕಾರಣವೂ ಇದೆ.

   ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್​ ಆಡುತ್ತಿರುವ ಶೀತಲ್ ದೇವಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಎಂಬ ಸಣ್ಣ ಹಳ್ಳಿಯ ನಿವಾಸಿ. 17 ವರ್ಷದ ಶೀತಲ್ ಫೋಕೊಮೆಲಿಯಾ ಎಂಬ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ತುತ್ತಾದವರ ದೇಹದಲ್ಲಿ ಕೆಲವು ಅಂಗಾಂಗಳು ಬೆಳೆಯುವುದಿಲ್ಲ. ಹೀಗಾಗಿ ಶೀತಲ್​ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಸಾಧನೆಗೆ ಇದ್ಯಾವುದು ಲೆಕ್ಕಕ್ಕಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿರುವ ಈ ಛಲಗಾತಿ ಇದೀಗ ಪ್ಯಾರಿಸ್​ನಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

   ಶೀತಲ್ 720 ಅಂಕಗಳಿಗೆ 703 ಅಂಕಗಳನ್ನು ಗಳಿಸಿ ರ‍್ಯಾಂಕಿಂಗ್ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್ ಕೂಡ ಆಗಿದೆ. ಇದರೊಂದಿಗೆ 700 ಅಂಕ ಗಳಿಸಿದ ಭಾರತದ ಮೊದಲ ಮಹಿಳಾ ಬಿಲ್ಲುಗಾರ್ತಿ ಎನಿಸಿಕೊಂಡಿದ್ದಾರೆ. ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನ ಪಡೆದಿರುವ ಶೀತಲ್ ಅವರಿಗೆ ಮುಂದಿನ ಸುತ್ತಿನಲ್ಲಿ ಬೈ ಸಿಕ್ಕಿದ್ದು, ಇದೀಗ ಅವರು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಗಸ್ಟ್ 31 ರಂದು ರಾತ್ರಿ 9 ಗಂಟೆಗೆ ಆಡಲಿದ್ದಾರೆ. 

   ಶೀತಲ್ ದೇವಿ ವೈಯಕ್ತಿಕ ಈವೆಂಟ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನಂತರ ಮಿಶ್ರ ಈವೆಂಟ್​ನಲ್ಲೂ ದಾಖಲೆ ಬರೆದಿದ್ದಾರೆ. ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ತಂಡವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ವಿಶ್ವ ಮತ್ತು ಪ್ಯಾರಾಲಿಂಪಿಕ್ ದಾಖಲೆಯನ್ನು ಸೃಷ್ಟಿಸಿದೆ. ಶೀತಲ್ ಅವರ 703 ಅಂಕಗಳ ನಂತರ, ರಾಕೇಶ್ ಕುಮಾರ್ ತಮ್ಮ ವೈಯಕ್ತಿಕ ಶ್ರೇಯಾಂಕದ ಸುತ್ತಿನಲ್ಲಿ 696 ಅಂಕಗಳನ್ನು ಗಳಿಸಿದರು.

   ಈ ಮೂಲಕ ತಮ್ಮ ತಮ್ಮ ರ ್ಯಾಂಕಿಂಗ್ ಸುತ್ತುಗಳು ಮುಗಿದ ಬಳಿಕ ಇಬ್ಬರೂ ಸೇರಿ ಒಟ್ಟು 1399 ಪಾಯಿಂಟ್ಸ್ ಕಲೆಹಾಕಿದರು. ಇದು ಮಿಶ್ರ ತಂಡ ಸ್ಪರ್ಧೆಯಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಇದರೊಂದಿಗೆ ಎರಡೂ ಜೋಡಿಗಳು ಇದೀಗ ಕ್ವಾರ್ಟರ್ ಫೈನಲ್ ತಲುಪಿವೆ. ಇದೀಗ ಅವರ ಕ್ವಾರ್ಟರ್ ಫೈನಲ್ ಪಂದ್ಯ ಸೆಪ್ಟೆಂವರ್ 2ರಂದು ರಾತ್ರಿ 8:40ಕ್ಕೆ ನಡೆಯಲಿದೆ.