ಮುಂಬೈ:
ಹುಡುಗರು ಸಿನಿಮಾದ ತೊಂದ್ರೆ ಇಲ್ಲಾ ಪಂಕಜಾ ಹಾಡಿನ ನಟಿ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ‘ಕಾಂಟಾ ಲಗಾ’ ಎಂಬ ಐಕಾನಿಕ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ನಟಿ ಮತ್ತು ರೂಪದರ್ಶಿ ಶೆಫಾಲಿ ಜರಿವಾಲಾ ಮುಂಬೈನಲ್ಲಿ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಆರಂಭಿಕ ವರದಿಗಳ ಪ್ರಕಾರ, ಗುರುವಾರ ತಡರಾತ್ರಿ ಶೆಫಾಲಿ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ತಕ್ಷಣ ಅವರ ಪತಿ, ನಟ ಪರಾಗ್ ತ್ಯಾಗಿ ಮತ್ತು ಇತರ ಮೂವರು ಮುಂಬೈನ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ತಲುಪುವ ಮುನ್ನವೇ ಶೆಫಾಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಸದಾ ಕಿರುತೆರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದ ಶೆಫಾಲಿ ನಿಧನ ಅವರ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಶೆಫಾಲಿಯನ್ನು ನೆನೆದು ಅನೇಕರು ಕಣ್ಣೀರಿಟ್ಟಿದ್ದಾರೆ.
ಬಾಲಿವುಡ್ ಗಾಯಕ ಮಿಕಾ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಮಾಡಿ ಸಂತಾಪ ವ್ಯಕ್ತಪಡಿಸಿದ್ದು, “ನನಗೆ ತೀವ್ರ ಆಘಾತವಾಗಿದೆ, ದುಃಖವಾಗಿದೆ ಮತ್ತು ಹೃದಯ ಭಾರವಾಗಿದೆ… ನಮ್ಮ ಪ್ರೀತಿಯ ತಾರೆ ಮತ್ತು ನನ್ನ ಆತ್ಮೀಯ ಸ್ನೇಹಿತೆ ಶೆಫಾಲಿ ನಮ್ಮನ್ನು ಅಗಲಿದ್ದಾರೆ. ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಗು ಮತ್ತು ಚೈತನ್ಯಕ್ಕಾಗಿ ನೀವು ಯಾವಾಗಲೂ ಸ್ಮರಣೀಯರು. ಓಂ ಶಾಂತಿ.” ಎಂದು ಬರೆದಿದ್ದಾರೆ. ನಟ ಅಲಿ ಗೋನಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “RIP Shefali” ಎಂದು ಭಾವನಾತ್ಮಕ ಪೋಸ್ಟ್‌ವೊಂದನ್ನು ಮಾಡಿದ್ದಾರೆ.








