ಬೆಂಗಳೂರು:
ನಟಿ ಶಿಲ್ಪಾ ಶೆಟ್ಟಿ ಒಡೆತನದ ಬಾಸ್ಟಿಯನ್ ರೆಸ್ಟೋರಂಟ್ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೆ ಹೆಚ್ಚಿನ ಸಮಯ ರೆಸ್ಟೋರಂಟ್ ತೆರೆದಿರುವುದು ಹಾಗೂ ನಿಯಮಗಳನ್ನು ಉಲ್ಲಂಘಿಸಿ ತಡರಾತ್ರಿ ಪಾರ್ಟಿಗಳಿಗೆ ಅವಕಾಶ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 103 ರ ಅಡಿಯಲ್ಲಿ ಸ್ವಯಂಪ್ರೇರಿತ ದೂರುಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಬಾಸ್ಟಿಯನ್ ನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವುದರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವರದಿಯ ಪ್ರಕಾರ, ಬಾಸ್ಟಿಯನ್ ಡಿಸೆಂಬರ್ 11 ರಂದು ಮುಂಜಾನೆ 1.30 ರವರೆಗೆ ತೆರೆಯಲಾಗಿತ್ತು ಎಂದು ಆರೋಪಿಸಲಾಗಿದೆ. ನಿಗದಿತ ಮುಕ್ತಾಯ ಸಮಯವನ್ನು ಮೀರಿ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಸಂಸ್ಥೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಾಸ್ಟಿಯನ್ ಜೊತೆಗೆ, ರೆಸಿಡೆನ್ಸಿ ರಸ್ತೆಯಲ್ಲಿರುವ ಸೋರ್ ಬೆರ್ರಿ ಪಬ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ತನಿಖೆಯ ಭಾಗವಾಗಿ, ಎಂಟು ಜನರು ಮತ್ತು ಪಬ್ ಸಿಬ್ಬಂದಿಯಿಂದ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಬ್ಯಾಸ್ಟಿಯನ್ ಪಬ್‌ನಲ್ಲಿ ಶನಿವಾರ ತಡರಾತ್ರಿ ಸುಮಾರು 1:30ರ ಸುಮಾರಿಗೆ ಗಲಾಟೆ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೆಲವರು ಜೋರಾಗಿ ವಾದ-ವಿವಾದ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಉದ್ಯಮಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಟಿವಿ ನಿರೂಪಕಿಯ ಮಾಜಿ ಪತಿ ಸತ್ಯ ನಾಯ್ಡು ಕೂಡ ಕಾಣಿಸಿಕೊಂಡಿದ್ದರು. ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದಾಗ ಬಿಲ್ ಪಾವತಿಸುವ ವಿಚಾರದಲ್ಲಿ ಈ ಜಗಳ ಆರಂಭವಾಗಿದೆ. ಇದು ಮಾತಿನ ಚಕಮಕಿಯಾಗಿ, ನಂತರ ಜೋರಾದ ವಾಗ್ವಾದಕ್ಕೆ ತಿರುಗಿದೆ. ಇನ್ನು, ಕೆಲವು ವರದಿಗಳ ಪ್ರಕಾರ ಸತ್ಯ ನಾಯ್ಡು, ವಾಗ್ವಾದದ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಪೋಲಿಸರು ವೈರಲ್ ವಿಡಿಯೋ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲು ಮಾಡಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ. ಅಧಿಕಾರಿಗಳು ಘಟನೆಯಲ್ಲಿ ಭಾಗಿಯಾದವರ ಹೇಳಿಕೆಗಳು ಹಾಗೂ ವಿಡಿಯೋ ಪರಿಶೀಲನೆ ನಡೆಸುತ್ತಿದ್ದಾರೆ.








