ಶಿರಾ:
ನಾಡ ಜಾಲಿ ಗಿಡಗಳನ್ನು ತೆಗೆಸದೆ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ
ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯು ಹೇಮಾವತಿ ಹಾಗೂ ಮಳೆಯ ನೀರಿನಿಂದ ತುಂಬಿದ್ದು, ಸದರಿ ಕೆರೆಯ ಏರಿಯಲ್ಲಿ ಸೋಮವಾರ ಬೆಳಗ್ಗೆ ಮಂಗೆ ಕಾಣಿಸಿಕೊಂಡು ಸಣ್ಣದಾಗಿ ನೀರು ಹೊರ ಬರುತ್ತಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳ್ಳಂಬೆಳ್ಳ ಕೆರೆಯು ತುಂಬಿ ಈಗಲೂ ಕೂಡ ಕೋಡಿಯಿಂದ ನೀರು ಹೊರ ಬರುತ್ತಿದ್ದು, ಕೆರೆಯು ತುಂಬಿ ಹರಿಯುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಕಳ್ಳಂಬೆಳ್ಳ ವ್ಯಾಪ್ತಿಯ ರೈತರಲ್ಲೂ ಸಂತಸ ಮೂಡಿತ್ತು. ಈ ಭಾಗದ ಅಂತರ್ಜಲ ವೃದ್ಧಿಸುವ ಜೀವನಾಡಿಯೂ ಆಗಿರುವ ಈ ಕೆರೆಯಿಂದ ಅನೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸಿದೆ. ಕಳ್ಳಂಬೆಳ್ಳ ಕೆರೆಯಿಂದ ಹೊರ ಬರುವ ಕೋಡಿಯ ನೀರು ಕೂಡ ಶಿರಾ ಕೆರೆಯನ್ನು ತಲುಪುತ್ತದೆ.
ಈ ನಡುವೆ ಇದ್ದಕ್ಕಿದ್ದಂತೆ ಸೋಮವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಕಳ್ಳಂಬೆಳ್ಳ ಗ್ರಾಮದ ಬಳಿಯ ಕೆರೆ ಕೋಡಿ ಸಮೀಪದ ಏರಿಯ ಬುಡದಲ್ಲಿ ಸಣ್ಣದೊಂದು ಮಂಗೆ ಕಂಡು ಬಂದಿದೆ. ಕೆರೆಯ ನೀರು ಸಣ್ಣಗೆ ಹೊರ ಬರುತ್ತಿರುವುದನ್ನು ಕಂಡ ಗ್ರಾಮಸ್ಥರಲ್ಲಿ ಕೆರೆ ಏರಿಯ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ಕೂಡಲೇ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನಾಯಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಕೆರೆ ಏರಿ ಬುಡದಲ್ಲಿ ಸಣ್ಣಗೆ ನೀರು ಬರುತ್ತಿರುವುದನ್ನು ಪರಿಶೀಲಿಸಿ ಯಾವುದೇ ರೀತಿಯಲ್ಲೂ ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಆದರೂ ಕೂಡಲೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುವಂತೆ, ಕೆರೆಗಳು ತುಂಬಿದ ಸಂದರ್ಭದಲ್ಲಿ ಕೆಲ ಕೆರೆಗಳು ತುಂಬಾ ಹಳೆವಾದ್ದರಿಂದ ಏರಿಯಲ್ಲಿ ಸಣ್ಣಗೆ ಕೆಲವೊಮ್ಮೆ ಸೀಪೇಜ್ ನೀರು ಕಾಣಿಸಿಕೊಳ್ಳುವುದು ಸಹಜ. ಕೆರೆ ಏರಿಯಲ್ಲಿ ಮಂಗೆ ಬಿದ್ದರೆ ಕೆರೆಯ ಒಳಗೆ ನೀರಿನ ಸುಳಿ ಕಾಣಿಸಿಕೊಳ್ಳಬೇಕು. ಅಂತಹ ಸುಳಿಯೂ ಕೂಡ ಕಾಣಿಸಿಕೊಂಡಿಲ್ಲ.
ಒಂದೆರಡು ದಿನಗಳಲ್ಲಿ ಜಿನುಗುವ ನೀರು ಸರಿ ಹೋದ ಪ್ರಸಂಗಗಳೂ ಇವೆ. ಆದರೂ ನೀರು ಸ್ಥಗಿತಗೊಳಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿರುವ ಅಧಿಕಾರಿಗಳು ಆತಂಕ ಪಡದಂತೆ ಗ್ರಾಮಸ್ಥರಿಗೆ ಮನವಿಯನ್ನೂ ಮಾಡಿದ್ದಾರೆ.
ಈ ಹಿಂದೆ 1980 ರಲ್ಲಿ ನಡೆದಂತಹ ಘಟನೆ ಇದೀಗ ಕಳ್ಳಂಬೆಳ್ಳ ಜನತೆಯಲ್ಲಿ ಭೀತಿ ಹುಟ್ಟಿಸಿದೆ. 1980ರಲ್ಲಿ ಕಳ್ಳಂಬೆಳ್ಳ ಕೆರೆಯು ತುಂಬಿ ಹರಿಯುತ್ತಿದ್ದಾಗ ಏರಿಯಲ್ಲಿ ಸಣ್ಣದೊಂದು ಮಂಗೆ ಬಿದ್ದು ನೀರು ಪೋಲಾಗುತ್ತಿತ್ತು.
ಆಗ ಸರಿ ರಾತ್ರಿ 2 ಗಂಟೆಯ ಸಮಯದಲ್ಲಿ ಕೆರೆ ಏರಿಯು ಒಡೆದು ಕೆರೆಯ ನೀರು ಪೋಲಾಗಿ ಮನೆಗಳು, ನೂರಾರು ಎಕರೆ ಅಡಕೆ ತೋಟಗಳು ಕೂಡ ನಾಶವಾಗಿದ್ದವು. ಅಂತಹ ಘಟನೆ ಎಂದೂ ಕೂಡ ಮರುಕಳಿಸಬಾರದೆನ್ನುವುದು ಗ್ರಾಮಸ್ಥರ ಆತಂಕದ ಹೇಳಿಕೆಯೂ ಆಗಿದೆ.
ಕೆರೆಗಳು ತುಂಬುವ ಮುನ್ನ ಸಣ್ಣ ನೀರಾವರಿ ಇಲಾಖೆಯು ಕೆರೆಯ ಏರಿಯ ಮೇಲೆ ಬೆಳೆದು ನಿಂತ ನಾಡ ಜಾಲಿ ಗಿಡಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕು. ನಾಡಜಾಲಿ ಗಿಡಗಳು ಬೆಳೆದು ಏರಿಯಲ್ಲಿ ಬೇರು ಬಿಟ್ಟುಕೊಂಡ ಪರಿಣಾಮ ಇಂತಹ ಘಟನೆಗಳಿಗೆ ಕಾರಣವಾಗಬಹುದೆಂಬ ಆತಂಕ ಗ್ರಾಮಸ್ಥರದ್ದಾಗಿದೆ.
ಕಳ್ಳಂಬೆಳ್ಳ ಕೆರೆಯು ಶಿರಾ ಕೆರೆಯ ಜೀವನಾಡಿಯೂ ಹೌದು. ಮೊದಲು ಕಳ್ಳಂಬೆಳ್ಳ ಕೆರೆಯು ತುಂಬಿದ ನಂತರ ಶಿರಾ ಕೆರೆಯತ್ತ ನೀರು ಸಾಗುತ್ತದೆ. ಹೀಗಾಗಿ ಈ ಕೆರೆಯ ಬಗ್ಗೆ, ಕೆರೆಯ ಏರಿಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ಹೆಚ್ಚಿನ ಆಸಕ್ತಿ ವಹಿಸಬೇಕು. ಕೆರೆ ತುಂಬುವ ಮುನ್ನ ನಾಡಜಾಲಿ ಗಿಡಗಳನ್ನು ತೆಗೆಸುವ ವ್ಯವಧಾನವೂ ಈ ಇಲಾಖೆಗೆ ಇಲ್ಲವಲ್ಲ ಎಂಬ ಬೇಸರ ಗ್ರಾಮಸ್ಥರದ್ದಾಗಿದೆ.
ಕೆರೆ ಏರಿಯಲ್ಲಿ ಸಣ್ಣಗೆ ಕಾಣಿಸಿಕೊಂಡ ಜಿನುಗು ನೀರಿನ ಪ್ರಸಂಗ ಸದ್ಯಕ್ಕೆ ದೊಡ್ಡದಾಗದಿದ್ದರೆ ಸಾಕು ಎಂದು ದೈವ ಸಂಕಲ್ಪಕ್ಕೂ ಮೊರೆ ಹೋಗಿರುವ ಗ್ರಾಮಸ್ಥರು, ಸಂಬಂಧಪಟ್ಟ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿ ಎಂಬ ಕಳಕಳಿಯ ಮನವಿಯನ್ನೂ ಮಾಡಿದ್ದಾರೆ.
– ಬರಗೂರು ವಿರೂಪಾಕ್ಷ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ