ಕೊನೆಗೂ ತುಂಬಿ ಹರಿದ ಶಿರಾ ತಾ. ಮದಲೂರು ಕೆರೆ

ಶಿರಾ:


ಅತ್ಯಂತ ಕಡು ಬೆಂಗಾಡಾಗಿರುವ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮದಲೂರು ಕೆರೆಯ ಹೆಸರು ಅನೇಕ ದಶಕಗಳವರೆಗೂ ಕೇವಲ ಶಿರಾ ತಾಲ್ಲೂಕಿಗಷ್ಟೆ ಸೀಮಿತವಾಗಿತ್ತು. ಇಂತಹ ಒಣ ಬರಡು ನೆಲದ ಕೆರೆಯೊಂದು ಇಡೀ ರಾಜ್ಯಾದ್ಯಂತ ಹೆಸರು ಮಾಡಿದ್ದು ನಿಜಕ್ಕೂ ಅಚ್ಚರಿಯೇನೂ ಅಲ್ಲ.

ಕಳೆದ 15-20 ವರ್ಷಗಳಿಂದಲೂ ಇಲ್ಲಿನ ಮದಲೂರು ಕೆರೆ ದಿನ ನಿತ್ಯವೂ ಸದ್ದು ಮಾಡಿದ್ದೇ ಮಾಡಿದ್ದು. ಮದಲೂರು ಅನ್ನುವ ಹೆಸರನ್ನೇ    ಕೇಳದ ಅನ್ಯ ಜಿಲ್ಲೆಯ ಜನತೆಯು ಇದಾವುದಪ್ಪಾ ಕೆರೆ ಎಂದು ಅಚ್ಚರಿಪಟ್ಟಿದ್ದೂ ಉಂಟು. ಶಿರಾ ಭಾಗದ ರಾಜಕಾರಣಿಗಳಿಗೆ, ರಾಜ್ಯದ ವಿವಿಧ ಪಕ್ಷಗಳ ಮುತ್ಸದ್ಧಿಗಳಿಗೆ ಮದಲೂರು ಕೆರೆ ನಿಜಕ್ಕೂ ಬಾಯಿಪಾಠವಾಗಿಬಿಟ್ಟಿತ್ತು. ಮದಲೂರು ಕೆರೆಯನ್ನು ಎಂದೂ ನೋಡಿಯೇ ಇರದ ಖಾದಿ ತೊಟ್ಟ ರಾಜಕಾರಣಿಗಳಿಗೆ ಈ ಕೆರೆಯ ಹೆಸರು ಮಾತ್ರ ಜಪದ ಮಾಲೆಯೇ ಆಯಿತು.

ಮದಲೂರು ಕೆರೆಯು ಇಷ್ಟೊಂದು ಸದ್ದು ಮಾಡಲು ಪ್ರಮುಖ ಕಾರಣವೂ ಇದೆ. ಈ ಕೆರೆಯು ಕಳೆದ 35 ವರ್ಷಗಳಿಂದಲೂ ತುಂಬಿ ಹರಿದ ನಿದರ್ಶನಗಳೇ ಇಲ್ಲ. ಮದಲೂರು ಕೆರೆಯು ತುಂಬಿ ಕೋಡಿ ಬಿದ್ದರೆ ಈ ಭಾಗದ ಮಗ್ಗದ ಗುಂಡಿಯಲ್ಲೂ ನೀರು ಬರುತ್ತದೆ ಅನ್ನುವ ಮಾತು ಜನಜನಿತವೂ ಆಗಿದೆ. ಈ ಕೆರೆಯು ತುಂಬಿ ಹರಿದರೆ ಹೆಚ್ಚುವ ಅಂತರ್ಜಲದ ಮಟ್ಟವನ್ನು ಕಂಡರೆ ನಿಜಕ್ಕೂ ಎಂತಹವರು ಕೂಡ ಅಚ್ಚ್ಚರಿಪಡಲೇಬೇಕಿದೆ. ಶಿರಾ ತಾಲ್ಲೂಕಿನ ಗೌಡಗೆರೆ, ಹುಲಿಕುಂಟೆ, ಹಿರಿಯೂರು ತಾಲ್ಲೂಕಿನ ಧರ್ಮಪುರ ವ್ಯಾಪ್ತಿಯಷ್ಟೇ ಅಲ್ಲದೆ ಸಮೀಪದ ಆಂಧ್ರ ಪ್ರದೇಶದ ಮಡಕ ಶಿರಾ, ಹಿಂದೂಪುರ, ಗುಡಿಬಂಡೆ, ಮದೂಡಿ ಭಾಗದ ಕೊಳವೆ ಬಾವಿಗಳ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ.

ಈ ಕೆರೆಯು ತುಂಬಿದರೆ ಸಾಕು 1,000 ಅಡಿಯವರೆಗೂ ಕೊಳವೆ ಬಾವಿ ಕೊರೆದು ವಿಫಲಗೊಂಡಿದ್ದ ಕೊಳವೆ ಬಾವಿಗಳಲ್ಲೂ ಕೂಡ ಕೇವಲ ಕೆಲವೇ ಅಡಿಗಳಷ್ಟರಲ್ಲಿ ಅಂತರ್ಜಲದ ಮೂಲ ಕಣ್ಣಿಗೆ ಕಾಣುತ್ತದೆ. ಈ ಕೆರೆ ತುಂಬಿದರೆ ಈ ಭಾಗದಲ್ಲಿ ಹಸಿರ ಸಿರಿ ಮೈದಡಿವಿಕೊಳ್ಳುತ್ತದೆ ಎಂಬ ಕಾರಣದಿಂದಲೇ ಮದಲೂರು ಕೆರೆಯನ್ನು ಕಂಡರೆ ಎಂತಹವರಿಗೂ ಅಚ್ಚು ಮೆಚ್ಚು. ಶಿರಾ ಕ್ಷೇತ್ರದ ವಿಧಾನಸಭಾ ಚುನಾವಣೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗಳು ಸಮೀಪಿಸಿದರೆ ಸಾಕು ಶಿರಾ ಮತದಾರರ ಮನವೊಲಿಕೆಗೆ ಮದಲೂರು ಕೆರೆ ಒಂದು ಪ್ರಮುಖ ಅಸ್ತ್ರವಾಗಿತ್ತು. ರಾಜಕೀಯ ಪಕ್ಷಗಳ ಪ್ರಮುಖರು ಚುನಾವಣಾ ಪ್ರಚಾರಕ್ಕೆಂದು ಈ ಭಾಗಕ್ಕೆ ಬಂದರೆ ಸಾಕು ಮದಲೂರು ಕೆರೆಗೆ ನೀರು ಹರಿಸುವ ಮಾತನ್ನು ಹೇಳದೇ ಇದ್ದರೆ ಅವರ ಭಾಷಣವೇ ಅಂತ್ಯ ಕಾಣುತ್ತಿರಲಿಲ್ಲ.

ತಾಲ್ಲೂಕಿನ ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗೆ ಹೇಮಾವತಿ ಯೋಜನೆಯ ನೀರನ್ನು ತುಮಕೂರು ನಾಲೆ 105.600 ಕಿ.ಮೀ.ನಿಂದ 0.9 ಟಿ.ಎಂ.ಸಿ.ಯಷ್ಟು ನೀರನ್ನು ನೈಸರ್ಗಿಕವಾದ ಕಳ್ಳಂಬೆಳ್ಳ ಹಳ್ಳದ ಮೂಲಕ ಹರಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸರ್ಕಾರ 2000ರಲ್ಲಿ ಈ ಯೋಜನೆಗೆ ಮಂಜೂರಾತಿ ಲಭ್ಯವಾಯಿತು. ಆರಂಭದಲ್ಲಿ ಕಳ್ಳಂಬೆಳ್ಳ ಕೆರೆಗೆ ನೀರು ಹರಿದಾಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರಲ್ಲದೆ ಈ ಎರಡೂ ಕೆರೆಗಳಿಗೆ ಹೇಮಾವತಿಯ ನೀರನ್ನು ಹರಿಸಿಕೊಳ್ಳುವಲ್ಲಿ ಮಾಜಿ ಸಚಿವ ಜಯಚಂದ್ರ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಸೋಲುಂಡಿದ್ದ ಜಯಚಂದ್ರ ಶಿರಾ ಭಾಗದ ಕಾಂಗ್ರೆಸ್ ಪಕ್ಷದ ಹಲವು ಮುಖಂಡರೊಡಗೂಡಿ ಈ ಎರಡೂ ಕೆರೆಗಳಿಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗಿತ್ತು.

ಮಂತ್ರಿಗಿರಿ ಬೇಡ, ನೀರು ಕೊಡಿ ಎಂದು ಪಿ.ಎಂ.ರಂಗನಾಥಪ್ಪ ಎಸ್.ಎಂ.ಕೃಷ್ಣ ಕಾಲಿಗೆ ಬಿದ್ದಿದ್ದರು..! : ಆಗ ಕ್ಷೇತ್ರದ ಶಾಸಕರಾಗಿದ್ದ ಪಿ.ಎಂ.ರಂಗನಾಥಪ್ಪ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಕಾಮಗಾರಿಗಳ ಉದ್ಘಾಟನೆಗೆಂದು ಚಿಕ್ಕನಹಳ್ಳಿಗೆ ಬಂದಿದ್ದಾಗ, ನನಗೆ ಮಂತ್ರಿಗಿರಿ ಬೇಡ, ಶಿರಾ ಕೆರೆಗೆ ನೀರು ಕೊಡಿ ಎಂದು ಕೃಷ್ಣ ಅವರ ಕಾಲಿಗೂ ಬಿದ್ದಿದ್ದರು. ಬೂವನಹಳ್ಳಿ ಶ್ರೀನಿವಾಸ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ನೀರಗಂಟಿಯಂತೆ ಕೆಲಸ ಮಾಡಿ ಹಗಲೂ, ರಾತ್ರಿ ನಿದ್ದೆ ಮಾಡದೇ ಶಿರಾ ಕೆರೆಗೆ ನೀರು ಹರಿಸಿಕೊಂಡಿದ್ದು ನಿಜಕ್ಕೂ ಒಂದು ಇತಿಹಾಸವೇ ಸರಿ.

ಶಿರಾ, ಮದಲೂರು ಕೆರೆ ತುಂಬಿದ ನಂತರ ಮದಲೂರು ಕೆರಯತ್ತ ಎಲ್ಲರ ದೃಷ್ಟಿ ನೆಟ್ಟಿತು 13.6.2006ರಲ್ಲಿ ಪ.ನಾ.ಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮದಲೂರು ಕೆರೆಯನ್ನು ಕಳ್ಳಂಬೆಳ್ಳ ಕೆರೆಗೆ ಜೋಡಣೆ ಮಾಡುವಂತೆ ಕೋರಿ ಅಂದಿನ ಸರ್ಕಾರಕ್ಕೆ ಪತ್ರ ಬರೆದರು. ಅಂದಿನಿಂದ ತಮ್ಮ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯವಾಗಿ ಪರಿವರ್ತಿಸಿಕೊಂಡು ಹೋರಾಟ ಶುರು ಮಾಡಿದ್ದರು.

ಎಚ್.ಡಿ.ಕೆ.ಯನ್ನು ಮದಲೂರು ಕೆರೆ ಏರಿ ಹತ್ತಿಸಿ ಹೇಮಾವತಿ ನೀರು ನೀಡುವಂತೆ ಸತ್ಯನಾರಾಯಣ್ ಮನವಿ ಮಾಡಿದ್ದರು : ಗಾಯತ್ರಿ ಯೋಜನೆಯ ಬಗ್ಗೆ ಹೆಚ್ಚು ಒಲವು ಇದ್ದರೂ ಕೂಡ ಕ್ಷೇತ್ರಕ್ಕೆ ನೀರು ಹರಿದರೆ ಸಾಕೆಂದು 22.12.2006 ರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆಂದು ಹೊನ್ನಗೊಂಡನಹಳ್ಳಿಗೆ ಬಂದಿದ್ದಾಗ ಎಚ್.ಡಿ.ಕೆ. ಅವರನ್ನು ಮದಲೂರು ಕೆರೆಯ ಏರಿಯ ಮೇಲೆ ಹತ್ತಿಸಿ ಈ ಕೆರೆಗೆ ಹೇಮಾವತಿ ನೀರು ನೀಡುವಂತೆ ಸತ್ಯನಾರಾಯಣ್ ಮನವಿ ಕೂಡ ಸಲ್ಲಿಸಿದ್ದರು. ಅಂದು ಶಾಸಕರಾಗಿದ್ದ ಇದೇ ಬಿ.ಸತ್ಯನಾರಾಯಣ್ 28.12.2006 ರಂದು ಕೂಡ ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಕೆ.ಸಿ.ರೆಡ್ಡಿ ಅವರಿಗೆ ಮದಲೂರು ಕೆರೆಯನ್ನು ಕಳ್ಳಂಬೆಳ್ಳ ಕೆರೆಗೆ ಜೋಡಣೆ ಮಾಡುವಂತೆ ಮತ್ತೊಂದು ಮನವಿ ಸಲ್ಲಿಸಿದರು. ಜೈರಾಮಯ್ಯ ಅನ್ನುವ ಎಂಜಿನಿಯರ್ ಈ ಕೆರೆ ಸಂಬಂಧ ತಾತ್ರಿಕ ಸಲಹೆ ನೀಡಿದ್ದರು.

ಟಿ.ಬಿ.ಜಯಚಂದ್ರ ಮದಲೂರು ಕೆರೆಗೆ ನೀರು ಹರಿಸುವ ಬಹಿರಂಗ ಹೇಳಿಕೆಯಿಂದ ಚುನಾವಣೆ ಗೆದ್ದಿದ್ದರು..! : ಕಳ್ಳಂಬೆಳ್ಳ ಕ್ಷೇತ್ರ ವಿಭಜನೆಗೊಂಡು ಕಳ್ಳಂಬೆಳ್ಳ ಹೋಬಳಿಯು ಶಿರಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಾಗ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಶಿರಾ ಕ್ಷೇತ್ರವನ್ನು 2008ರಲ್ಲಿ ಆಯ್ಕೆ ಮಾಡಿಕೊಂಡ ಮಾಜಿ ಸಚಿವ ಟಿ.ಬಿ.ಜಯಚಂದ್ರ 21.4.2008 ರಂದು ಶ್ರೀ ಕ್ಷೇತ್ರ ಪ.ನಾ.ಹಳ್ಳಿಯಲ್ಲಿ ನಡೆದ ನೀರಾವರಿ ಹಕ್ಕೊತ್ತಾಯ ಸಮಾವೇಶದಲ್ಲಿ ಮದಲೂರು ಕೆರೆಗೆ ನೀರು ಹರಿಸುವ ಬಹಿರಂಗ ಹೇಳಿಕೆ ನೀಡಿದ್ದು ಅವರ ಶಿರಾ ಕ್ಷೇತ್ರದ ಮೊದಲ ಆಯ್ಕೆಗೆ ಕಾರಣವೂ ಆಗಿತ್ತು. ಕಾರಣ ಈಗಾಗಲೇ ಶಿರಾ, ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಲು ಶ್ರಮಿಸಿದ್ದ ಜಯಚಂದ್ರ ಮದಲೂರು ಕೆರೆಯನ್ನೂ ತುಂಬಿಸುತ್ತಾರೆಂಬ ಆಶಾ ಭಾವನೆ ಈ ಕ್ಷೇತ್ರದ ಜನರಲ್ಲಿತ್ತು.

ಮದಲೂರು ಕೆರೆಗೆ ನೀರು ಹರಿದರೆ ಸಾಕೆಂದು ಹಂಬಲಿಸಿದ್ದ ಮತದಾರರು ಇದೊಂದೇ ಕಾರಣಕ್ಕೆ ಜಯಚಂದ್ರ ಅವರನ್ನು 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುತಗಳಿಂದ ಆಯ್ಕೆ ಮಾಡಿಕೊಂಡಿದ್ದು ನಿಜಕ್ಕೂ ಮೆಚ್ಚುವಂತಹ ವಿಚಾರವೂ ಆಗಿತ್ತು. ಈ ನಡುವೆ ಬಿ.ಸತ್ಯನಾರಾಯಣ್ ಶಾಸಕರಾಗಿದ್ದಾಗ ಸಲ್ಲಿಸಿದ್ದ 28.12.2006 ಮನವಿಯಂತೆ ಸರ್ಕಾರದ ಪ್ರಸ್ತಾವನೆಯೊಂದು ಹೊರ ಬರುವ ಮೂಲಕ ಯೋಜನೆಯ ಸಾಕಾರಕ್ಕೆ ಮಾರ್ಗವೂ ಆಯಿತು.

ಐ.ಐ.ಎಸ್.ಸಿ. ವಿಜ್ಞಾನಿಗಳು ಅಧ್ಯಯನ ನಡೆಸಿ, ಇಲ್ಲಿನ ಫ್ಲೋರೈಡ್‍ಯುಕ್ತ ನೀರಿನಿಂದ ತಾಯಿ ಎದೆ ಹಾಲು ಕೂಡ ವಿಷವಾಗುತ್ತದೆ ಎಂದು ವರದಿ ನೀಡಿದ್ದರು..! : 2010ರಲ್ಲಿ ಮದಲೂರು ಕೆರೆಯ ಸಂಬಂಧ ಐ.ಐ.ಎಸ್.ಸಿ. ವಿಜ್ಞಾನಿಗಳು ಈ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿದಾಗ ಈ ಭಾಗದಲ್ಲಿ ಫ್ಲೋರೈಡ್‍ಯುಕ್ತ ನೀರಾಗಿದ್ದು ಕೆಲ ವರ್ಷಗಳಲ್ಲಿ ತಾಯಿ ಎದೆ ಹಾಲು ಕೂಡ ವಿಷವಾಗಬಹುದೆಂದು ಮದಲೂರು ಕೆರೆಗೆ ನೀರು ನೀಡಲು ಒತ್ತಾಯಿಸಿ ಜಯಚಂದ್ರ ಅವರು ವಿಜ್ಞಾನಿಗಳ ಅಧ್ಯಯನದ ವರದಿಗೆ ಪೂರಕ ಅಂಶಗಳ ಮನವಿಗಳನ್ನು ನೀಡಿದ್ದರು.

ರಾಜ್ಯ ಸರ್ಕಾರವು ಮದಲೂರು ಕೆರೆಯ ಚಾನಲ್‍ಗೆ ಅನುದಾನ ನೀಡಲು ನಿರಾಕರಿಸಿದಾಗ ಜಯಚಂದ್ರ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಕದ ತಟ್ಟಿದರು. ಕಳ್ಳಂಬೆಳ್ಳ-ಮದಲೂರು ಕೆರೆಗೆ 34 ಕಿ.ಮೀ. ಕಾಲುವೆ ನಿರ್ಮಾಣ ನಡೆದ 11 ಕೆರೆಗಳಿಗೆ ನೀರು ಹಾಯಿಸುವ ಯೋಜನೆಗೆ 22.1.2021 ರಂದು ಅಡಿಗಲ್ಲು ಲಭ್ಯವಾಯಿತು. 16.10.2017 ರಿಂದ 13 ದಿನಗಳವರೆಗೆ ಮದಲೂರು ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಯಿತಾದರೂ ಕೆರೆಯನ್ನು ತುಂಬಿಸಲಾಗಲಿಲ್ಲ. ಈ ನಡುವೆ ವಿಧಾನಸಭಾ ಚುನಾವಣೆ ಹಾಗೂ ಸಂಸತ್ ಚುನಾವಣೆಯ ಸಂದರ್ಭಗಳಲ್ಲಿ ಮದಲೂರು ಕೆರೆಗೆ ನೀರು ಹರಿಸಿ ತುಂಬಿಸುವ ವಿಚಾರಗಳು ಮನಸೋ ಇಚ್ಛೆ ಮೇಳೈಸಲು ಆರಂಭಿಸಿದವು. ಮದಲೂರು ಕೆರೆ ಹೆಸರೇಳಿದರೆ ಸಾಕು ಶಿರಾ ಭಾಗದ ಮುಗ್ದ ಜನ ಮತ ಚಲಾಯಿಸುತ್ತಾರೆಂಬ ಪೂರ್ಣ ನಂಬಿಕೆ ಇಲ್ಲಿನ ರಾಜಕಾರಣಿಗಳ ಮನಸನ್ನು ಮೀಟಿ ಬಿಟ್ಟಿತ್ತು.

ಬಿ.ಜೆ.ಪಿ. ಅಭ್ಯರ್ಥಿ ಆಯ್ಕೆಗೊಂಡ 6 ತಿಂಗಳಲ್ಲಿ ಮದಲೂರು ಕೆರೆ ತುಂಬಿಸುವ ಯಡಿಯೂರಪ್ಪ ಅವರ ಬಹಿರಂಗ ಹೇಳಿಕೆಯಿಂದ ಉಪಚುನಾವಣೆ ಗೆದ್ದರು : ಈ ಮಧ್ಯೆ ಶಾಸಕರಾಗಿದ್ದ ಬಿ.ಸತ್ಯನಾರಾಯಣ್ ಅಕಾಲಿಕ ಮರಣಕ್ಕೆ ಈಡಾದ ನಂತರ ಈ ಕ್ಷೇತ್ರವನ್ನು ಬಿ.ಜೆ.ಪಿ. ತೆಕ್ಕೆಗೆ ಹಾಕಿಕೊಳ್ಳುವ ಹುಮ್ಮಸ್ಸು ಆ ಪಕ್ಷದ ಹಿರಿಯ ಧುರೀಣರಿಗೆ ಸವಾಲಾಗಿ ಪರಿಣಮಿಸಿತು. ಈ ಕ್ಷೇತ್ರ ಉಪ ಚುನಾವಣೆ ಅನಿವಾರ್ಯವಾದಾಗ ಡಾ.ಸಿ.ಎಂ.ರಾಜೇಶ್‍ಗೌಡ ಬಿ.ಜೆ.ಪಿ.ಯ ಹುರಿಯಾಳಾಗಿ ಸ್ಪರ್ಧಿಸಿದರು. ನಮ್ಮ ಅಭ್ಯರ್ಥಿ ಆಯ್ಕೆಗೊಂಡ 6 ತಿಂಗಳಲ್ಲಿ ಮದಲೂರು ಕೆರೆ ತುಂಬಿಸುವ ಯಡಿಯೂರಪ್ಪ ಅವರ ಬಹಿರಂಗ ಹೇಳಿಕೆ ಮತ್ತೊಮ್ಮೆ ಈ ಭಾಗದ ಮತದಾರರ ಮನವೊಲಿಕೆಗೆ ಕಾರಣವೂ ಆಗಿ ಶಿರಾ ಭಾಗದ ಇತಿಹಾಸದಲ್ಲಿ ಎಂದೂ ಆಯ್ಕೆಗೊಳ್ಳದ ಬಿ.ಜೆ.ಪಿ. ಅಭ್ಯರ್ಥಿಯ ಗೆಲುವಿಗೆ ಕಾರಣವಾಯಿತು.

ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ಹೇಮಾವತಿ ನೀರು ಹರಿದು ತುಂಬುವ ಹಂತದಲ್ಲಿದ್ದಾಗ ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ತಾಂತ್ರಿಕ ದೋಷವನ್ನು ಮುಂದು ಮಾಡಿದ್ದ ಜಿಲ್ಲಾ ಸಚಿವ ಮಾಧುಸ್ವಾಮಿ ಕೂಡ ಹೆಚ್ಚುವರಿ ನೀರನ್ನು ಕೊಂಡೊಯ್ಯಲು ಗ್ರೀನ್ ಸಿಗ್ನಲ್ ನೀಡಿದ್ದರು. ಈ ನಡುವೆ ವರುಣನ ಕೃಪೆಯೂ ಆಗಿ ಕಳ್ಳಂಬೆಳ್ಳ ಭಾಗದ ಹಳ್ಳ, ಕೊಳ್ಳಗಳು ತುಂಬಿ ಹರಿದವು. ಮದಲೂರು ಕೆರೆ ನೀರು ಬರುವ ಮಾರ್ಗ ಮಧ್ಯದ ಅನೇಕ ಕೆರೆಗಳೂ ತುಂಬಿದವು. ಮದಲೂರು ಕೆರೆಗೂ ನೀರು ಹರಿದು ಇದೀಗ ನಿನ್ನೆಯಷ್ಟೇ 35 ವರ್ಷಗಳಿಂದಲೂ ತುಂಬದ ಮದಲೂರು ಕೆರೆ ಭರ್ತಿಯಾಗಿದ್ದು ತಾಲ್ಲೂಕಿನ ಜನತೆಯಲ್ಲಿ ಮಂದಹಾಸ ಮೂಡಿದೆ.

ಮದಲೂರು ಕೆರೆಗೆ ನೀರು ಹರಿಸಿ ಕೊಟ್ಟ ಮಾತಿನಂತೆ, ನುಡಿದಂತೆ, ನಡೆದಿದ್ದೇವೆ ಎಂಬ ಹೆಗ್ಗಳಿಕೆ ಬಿ.ಜೆ.ಪಿ. ಪಕ್ಷದ್ದಾದರೆ, ಕೋಟಿ ಕೋಟಿ ರೂಗಳ ವೆಚ್ಚದಲ್ಲಿ ಚಾನಲ್ ನಿರ್ಮಿಸಿ ಜನರ ನೀರಿನ ಆಶೋತ್ತರಕ್ಕೆ ಜಯಚಂದ್ರ ಸ್ಪಂದಿಸಿದ್ದಾರೆಂಬ ಮನೋತೃಪ್ತಿ ಕಾಂಗ್ರೆಸ್ ಪಕ್ಷದ ಮುಖಂಡರದ್ದಾಗಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಮದಲೂರು ಕೆರೆಗೆ ಮೊದಲಿಗೆ ನೀರು ಕೊಡಬೇಕೆಂದು ಒತ್ತಾಯಿಸಿದ ಬಹು ಮಂದಿಯ ಹೆಸರುಗಳು ಮಾತ್ರ ರಾಜಕೀಯ ಮೇಲಾಟಗಳಲ್ಲಿ ಕರಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಮದಲೂರು ಕೆರೆಯನ್ನು ತುಂಬಿಸಿದ  ಪಡೆಯಲು ಈಗಾಗಲೇ ಮತ್ತೊಮ್ಮೆ ರಾಜಕೀಯ ಮೇಲಾಟ ಆರಂಭಗೊಂಡಿದೆ. ಎಂದೂ ಸರಿಯಾಗಿ ಮದಲೂರು ಕೆÀರೆಯನ್ನೆ ನೋಡದ ಅನೇಕ ರಾಜಕೀಯ ಧುರೀಣರು ತುಂಬಿದ ಕೆರೆಗೆ ಗಂಗಾಪೂಜೆ ಮಾಡಲು ಬರುತ್ತಿದ್ದಾರೆ. ನೀರಿಗೆ ಪೂಜೆ ಸಲ್ಲಿಸಿ ನೀರು ಹರಿಸಿದ ಕ್ರ್ರೆಡಿಟ್ ಗಿಟ್ಟಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ರಾಜಕಾರಣಿಗಳು ಎಡತಾಕುತ್ತಿದ್ದಾರೆ. ಈ ಕೆರೆಗೆ ನೀರು ಹರಿಸಿಕೊಳ್ಳುವ ಪ್ರಯತ್ನ ನಡೆಸಿದವರು ಒಂದಿಬ್ಬರಂತೂ ಅಲ್ಲ, ಸಾಕಷ್ಟು ಮಂದಿ ಇದ್ದಾರೆ. ರೈತ ಸಂಘಗಳು, ಹೇಮಾವತಿ ಹೋರಾಟ ಸಮಿತಿಯ ಪ್ರತಿಭಟನೆಗಳು, ಪಾದಯಾತ್ರೆ ನಡೆಸಿದ ವಿವಿಧ ಪಕ್ಷಗಳ ಕಾರ್ಯಕರ್ತ-ಮುಖಂಡರು ಮದಲೂರು ಕೆರೆಗೆ ನೀರು ಹರಿಯಲು ಒಂದಲ್ಲಾ ಒಂದು ರೀತಿಯಲ್ಲಿ ಕಾರಣವಾಗಿದ್ದಾರೆ.

ಒಟ್ಟಾರೆ ಮದಲೂರು ಕೆರೆಗೆ ನೀರು ಹರಿಸುವುದನ್ನೇ ಮುಂದು ಮಾಡಿಕೊಂಡು ಈವರೆಗೆ ಚುನಾವಣೆಗಳಲ್ಲಿ ಆಯ್ಕೆಗೊಂಡು ಬರುತ್ತಿದ್ದವರಿಗೆ ಮುಂದೆ ಪೀಕಲಾಟ ಆರಂಭವಾಗಿದೆ. ಕಾರಣ ಮದಲೂರು ಕೆರೆ ತುಂಬಿ ಹರಿದುಬಿಟ್ಟಿದೆ. ಮದಲೂರು ಕೆರೆ ಹೆಸರಲ್ಲಿ ಗೆದ್ದು ಬೀಗುತ್ತಿದ್ದವರು ಈಗ ಮುಂದಿನ ಚುನಾವಣೆಗಳಿಗೆ ಆಯ್ಕೆಗೊಳ್ಳಲು ಯಾವ ಅಸ್ತ್ರಗಳನ್ನು ಬಳಸಬೇಕೆಂದು ಹುಡುಕಾಡಿಕೊಂಡು ತಡಬಡಾಯಿಸುತ್ತಿದ್ದಾರೆ.

ಮದಲೂರು ಕೆರೆಯನ್ನು ತುಂಬಿಸಿದ ಕ್ರಡಿಟ್ ಪಡೆಯಲು ಈಗಾಗಲೇ ಮತ್ತೊಮ್ಮೆ ರಾಜಕೀಯ ಮೇಲಾಟ ಆರಂಭಗೊಂಡಿದೆ. ಎಂದೂ ಸರಿಯಾಗಿ ಮದಲೂರು ಕೆರೆಯನ್ನೆ ನೋಡದ ಅನೇಕ ರಾಜಕೀಯ ಧುರೀಣರು ಕೂಡಾ ತುಂಬಿದ ಕೆರೆಗೆ ಗಂಗಾಪೂಜೆ ಮಾಡಲು ಬರುತ್ತಿದ್ದಾರೆ. ನೀರಿಗೆ ಪೂಜೆ ಸಲ್ಲಿಸಿ ನೀರು ಹರಿಸಿದ ಕ್ರ್ರೆಡಿಟ್ ಗಿಟ್ಟಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಎಡತಾಕುತ್ತಿದ್ದಾರೆ.

(ಬರಗೂರು ವಿರೂಪಾಕ್ಷ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap