ಹಾಸನ : ಶಿರಾಡಿಘಾಟ್​ನಲ್ಲಿ ಮತ್ತೆ ಭೂಕುಸಿತದ ಭೀತಿ

ಹಾಸನ

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 4 ದಿನಗಳಿಂದ ಧಾರಾಕಾರ ಮಳೆ ಮುಂದುವರೆದಿದೆ. ಹೀಗಾಗಿ ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್  ರಸ್ತೆಯಲ್ಲಿ ಮತ್ತೆ ಭೂಕುಸಿತ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಮಣ್ಣು ಕುಸಿಯುತ್ತಿರುವ ಕಡೆ ಸೂಚನಾ ಫಲಕ ಅಳವಡಿಸುವ ಮೂಲಕ ತಾಲೂಕು ಆಡಳಿತ, ಹೆದ್ದಾರಿ ಪ್ರಾಧಿಕಾರದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

   ಭೂಕುಸಿತ ಭೀತಿ ಹಿನ್ನಲೆ ಪ್ರತಿನಿತ್ಯ ಆತಂಕದಲ್ಲೇ ವಾಹನ ಸವಾರರು ಸಂಚಾರ ಮಾಡುವಂತಾಗಿದೆ. ಜುಲೈ ತಿಂಗಳಲ್ಲಿ ಧಾರಾಕಾರ ಮಳೆಯಿಂದ ದೊಡ್ಡತಪ್ಲು ಬಳಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಮಳೆಯಾಗುತ್ತಿರುವುದರಿಂದ ಭೂಕುಸಿತದ ಭೀತಿ ಎದುರಾಗಿದೆ. 

   ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಜೋರು ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗುತ್ತಿವೆ. ಪದೇ ಪದೆ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದಲ್ಲಿ ಮಾತ್ರ ಪದೇ ಪದೆ ಗುಡ್ಡ ಕುಸಿತವಾಗುತ್ತಿರುವುದರಿಂದ ರೈಲು ಸಂಚಾರಕ್ಕೆ ತಡೆಯಾಗುತ್ತಿದೆ.

   ಆಗಸ್ಟ್ 10ರಂದು ಸಕಲೇಶಪುರ ತಾಲ್ಲೂಕಿನ ಬಾಳ್ಳೂಪೇಟೆ ಸಮೀಪದ ದೊಡ್ಡನಾಗರಬಳಿ ಗುಡ್ಡ ಕುಸಿದು ನಾಲ್ಕು ದಿನ ರೈಲು ಸಂಚಾರಕ್ಕೆ ತಡೆಯಾಗಿತ್ತು. ಹಳಿ ಮೇಲೆ ಬಿದ್ದಿದ್ದ ಭಾರಿ ಪ್ರಮಾಣದ ಮಣ್ಣು ಹಾಗೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನ ತೆರವು ಮಾಡಿ ಬಳಿಕ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

   ಆದರೆ ಅದೇ ದಿನದಂದು ಮಧ್ಯಾಹ್ನದ ವೇಳೆಗೆ ಮತ್ತೆ ಅದೇ ಸ್ಥಳದಲ್ಲಿ ಹಳಿ ಮೇಲೆ ಮಣ್ಣು ಕುಸಿದು ಮತ್ತೆ ರೈಲು ಸಂಚಾರಕ್ಕೆ ತಡೆಯಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಸಾವಿರಾರು ಜನರನ್ನು ಹೊತ್ತ ಬೆಂಗಳೂರು ಕಾರವಾರ ಎಕ್ಸಪ್ರೆಸ್ ಸಕಲೇಶಫುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪವೇ ಸಿಲುಕಿ ಪ್ರಯಾಣಿಕರು ಪರದಾಡಿದ್ದರು. 

   ಏಕಾಏಕಿ ಮಣ್ಣು ಕುಸಿದ ಮಾಹಿತಿ ತಿಳಿದು ಮಂಗಳೂರಿನತ್ತ ಹೊರಟಿದ್ದ ರೈಲನ್ನ ಬಾಳ್ಳುಪೇಟೆ ಸಮೀಪವೇ ನಿಲ್ಲಿಸಲಾಗುತ್ತು. ಆದರೆ ಮಧ್ಯಾಹ್ನದ ಸಮಯವಾದ್ದರಿಂದ ಅಲ್ಲಿ ಊಟ, ಕುಡಿಯುವ ನೀರು ಸಿಗದೆ ಪ್ರಯಾಣಿಕರು ಪರದಾಡಿದ್ದರು. ಬಾಳ್ಳುಪೇಟೆಯಲ್ಲಿ ರೈಲು ನಿಲ್ದಾಣ ಮಾಡಲಾಗಿತ್ತು. ಆದರೆ ಇಲ್ಲಿಗೆ ಬರಲು ರಸ್ತೆಯನ್ನೇ ಸಮರ್ಪಕವಾಗಿ ಮಾಡಿಲ್ಲ ಹಾಗಾಗಿ ಯಾವುದೇ ವಾಹನ ಇಲ್ಲಿಗೆ ಬರಲು ಆಗೋದಿಲ್ಲ, ಕುಡಿಯಲು ನೀರಿಲ್ಲ, ಊಟ ತಿಂಡಿ ಸಿಕ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದರು.

Recent Articles

spot_img

Related Stories

Share via
Copy link
Powered by Social Snap