ಶಿರೂರು ಗುಡ್ಡ ಕುಸಿತ: ಶೇ.75ರಷ್ಟು ಅವಶೇಷ ತೆರವು

ದಕ್ಷಿಣ ಕನ್ನಡ: 

   ದಕ್ಷಿಣ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡಕುಸಿತ ಪ್ರಕರಣ ರಕ್ಷಣಾ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಈ ವರೆಗೂ 6 ಜನರ ಶವ ಪತ್ತೆಯಾಗಿ, ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

    ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಮಂಗಳವಾರ ಗುಡ್ಡಕುಸಿದು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಮುಚ್ಚಿಹೋಗಿತ್ತು. ಇದೀಗ ಸತತ 4 ದಿನಗಳ ಕಾರ್ಯಾಚರಣೆ ಬಳಿಕ ಈ ವರೆಗೂ ಶೇ.75 ರಷ್ಟು ಅವಶೇಷಗಳನ್ನು ಶುಕ್ರವಾರ ಸಂಜೆ ವೇಳೆಗೆ ತೆರವುಗೊಳಿಸಲಾಗಿದೆ.

    ಭಾರತೀಯ ನೌಕಾಪಡೆಯ ಸೀ-ಬರ್ಡ್‌ನ ಆಳವಾದ ಸಮುದ್ರ ಡೈವರ್‌ಗಳು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ  ಗಂಗವಳಿ ನದಿಯ ಕೆಸರು ನೀರನ್ನು ಸ್ಕ್ಯಾನ್ ಮಾಡಿದ ನಂತರ ಶುಕ್ರವಾರ ರಕ್ಷಣಾ ಕಾರ್ಯಾಚರಣೆ ವೇಗ ಪಡೆದಿದೆ.

   ರಾಷ್ಟ್ರೀಯ ಹೆದ್ದಾರಿ 66ಯ ಒಂದು ಭಾಗದಲ್ಲಿ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಲಾಗಿದೆ. ಈ ಪ್ರದೇಶವು ಇನ್ನೂ ನಿಯಮಿತವಾಗಿ ಭೂಕುಸಿತಕ್ಕೆ ಸಾಕ್ಷಿಯಾಗುತ್ತಿರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಅನುಮತಿಸಲು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಧಾರಾಕಾರ ಮಳೆಯ ನಡುವೆಯೂ ಮಣ್ಣು ತೆರವು ಭರದಿಂದ ಸಾಗಿದ್ದು, ಐಆರ್‌ಬಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.

   ಎನ್‌ಡಿಆರ್‌ಎಫ್‌, ಪೊಲೀಸ್ ತಂಡಗಳು ಶೋಧ ಕಾರ್ಯ ಮುನ್ನಡೆಸಿವೆ. ಮಳೆಯಿಂದಾಗಿ ಗುಡ್ಡದಿಂದ ಝರಿಯಂತೆ ನೀರು ಹರಿದುಬರುತ್ತಿದ್ದು, ಮತ್ತೆ ಗುಡ್ಡ ಕುಸಿತ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. 

   ಜಿಲ್ಲಾಡಳಿತದ ಮಾಹಿತಿಯಂತೆ ಇಲ್ಲಿ 10 ಮಂದಿ ಕಣ್ಮರೆಯಾಗಿದ್ದಾರೆ; ಇವರಲ್ಲಿ 6 ಮಂದಿಯ ಶವಗಳು ಸಿಕ್ಕಿವೆ ಹಾಗೂ ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಶಿರೂರು ಗ್ರಾಮದ ಜಗನ್ನಾಥ್ ನಾಯ್ಕ್ ಮತ್ತು ಸನ್ನಿಗೌಡ ಮತ್ತು ಕೇರಳದ ಟ್ರಕ್ ಚಾಲಕ ಅರ್ಜುನ್ ಎಂಬ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶನಿವಾರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

  ಕೇರಳ ಮೂಲದ ಟ್ರಕ್ ಮಾಲೀಕ ಮುನ್ನಾಫ್ ಶುಕ್ರವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ವಾಹನದಿಂದ ಕೊನೆಯ ಜಿಪಿಎಸ್ ಸ್ಥಳದ ಪ್ರಕಾರ ಅವರ ಒಂದು ಟ್ರಕ್ ಅವಶೇಷಗಳಡಿಯಲ್ಲಿದೆ ಎಂದು ಹೇಳಿದ್ದಾರೆ. ಭೂಕುಸಿತದಲ್ಲಿ ಸಿಲುಕಿರುವ ಟ್ರಕ್ ಚಾಲಕ ಅರ್ಜುನ್ ಅವರ ಕುಟುಂಬ ಸದಸ್ಯರು ಶುಕ್ರವಾರ ಬೆಳಿಗ್ಗೆಯೂ ಅವರ ಮೊಬೈಲ್ ಫೋನ್ ರಿಂಗ್ ಆಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸರು ಮೆಟಲ್ ಡಿಟೆಕ್ಟರ್ ಸಹಾಯದಿಂದ ಸ್ಥಳವನ್ನು ಗುರುತಿಸಿದರು. ಆದರೆ, ಅವರ ಸುಳಿವು ಸಿಕ್ಕಿರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap