ಬೆಂಗಳೂರು:
ನಮ್ಮ ಮೆಟ್ರೋ ಪಿಂಕ್ ಲೈನ್ ಯಾವಾಗ ಕಾರ್ಯಾರಂಭ ಮಾಡಲಿದೆ ಎಂಬ ಮಾಹಿತಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ನೀಡಿದ್ದಾರೆ. 2026ರ ಮೇನಲ್ಲಿ ಗುಲಾಬಿ ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ. ‘ಎಕ್ಸ್’ನಲ್ಲಿ ಅವರು ಮಾಡಿರುವ ಪೋಸ್ಟ್ನಲ್ಲಿ, ʼಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಗುಲಾಬಿ ಮಾರ್ಗದ ಸಂಚಾರ ಮುಂದಿನ ವರ್ಷ ಮೇ ತಿಂಗಳಲ್ಲಿ ಆರಂಭವಾಗಲಿದೆ. ಈ ಮಾರ್ಗವು 13.76 ಕಿ.ಮೀ. ಭೂಗತ ಮಾರ್ಗವನ್ನು ಹೊಂದಿದ್ದು, ಸಂಚಾರ ಸುಗಮವಾಗಲಿದೆ’ ಎಂದಿದ್ದಾರೆ. ಇದು ಟ್ರಾಫಿಕ್ ಉಲ್ಬಣದಿಂದ ತತ್ತರಿಸುತ್ತಿರುವ ರಾಜಧಾನಿ ಬೆಂಗಳೂರಿನ ಜನತೆಗೆ ಸಿಹಿ ಸುದ್ದಿಯಾಗಿದೆ.
‘ಉತ್ತಮ ಸಂಪರ್ಕಕ್ಕೆ ನಮ್ಮ ಬದ್ಧತೆ ಮುಂದುವರಿಯುತ್ತದೆ! ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ 13.76 ಕಿಮೀ ಉದ್ದದ ಮಾರ್ಗವು ಬೆಂಗಳೂರಿನಾದ್ಯಂತ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ಬೆಂಗಳೂರು ದಕ್ಷಿಣದಿಂದ ಉತ್ತರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ 13.76 ಕಿಮೀ ಉದ್ದದ ಭೂಗತ ಮಾರ್ಗವಿದೆ. ಬೆಂಗಳೂರಿನಾದ್ಯಂತ ಸಂಚಾರವನ್ನು ಸುಗಮಗೊಳಿಸುತ್ತದೆ. ಜತೆಗೆ ನಗರದ ಉತ್ತರ – ದಕ್ಷಿಣ ಸಂಪರ್ಕವನ್ನು ಬಲಪಡಿಸುತ್ತದೆ” ಎಂದು ಡಿಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಳೇನ ಅಗ್ರಹಾರ- ನಾಗವಾರ ನಡುವಿನ ಗುಲಾಬಿ ಮಾರ್ಗವು 21 ಕಿಮೀ ಉದ್ದ ಹೊಂದಿದ್ದು, ಇದರ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಇದರಲ್ಲಿ 13.76 ಕಿಮೀ ಸುರಂಗ ಮಾರ್ಗವಾಗಿದೆ. ಇದು ಅತಿ ಉದ್ದದ ಭೂಗತ ಮಾರ್ಗ. ಈ ಸುರಂಗದಲ್ಲಿ 12 ನಿಲ್ದಾಣಗಳು ಇವೆ. ಇನ್ನುಳಿದ ಆರು ನಿಲ್ದಾಣಗಳು ಎತ್ತರಿಸಿದ ಮಾರ್ಗದಲ್ಲಿ ಇವೆ. ನಾಲ್ಕು ಪ್ಯಾಕೇಜ್ಗಳಲ್ಲಿ ಸುರಂಗ ಮಾರ್ಗದ ಕಾಮಗಾರಿ ಶೇಕಡಾ 95ರಷ್ಟು ಪೂರ್ಣಗೊಂಡಿದೆ. ಈ ಕಾಮಗಾರಿ 2020ರ ಆಗಸ್ಟ್ 22ರಂದು ಆರಂಭಗೊಂಡು, 2024ರ ಅಕ್ಟೋಬರ್ 30ರಂದು ಮುಕ್ತಾಯಗೊಂಡಿದೆ. ಭೂಗತ ನಿಲ್ದಾಣಗಳಲ್ಲಿ ಮೆಟ್ಟಿಲು ನಿರ್ಮಾಣ, ಹಳಿ ಜೋಡಣೆ, ವಿದ್ಯುತ್ ಸಂಪರ್ಕ, ಎಲಿವೇಟರ್, ಎಸಿ, ಮತ್ತು ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.
ಮೊದಲಿಗೆ 2025 ಅಂತ್ಯದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯದೇವ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರಸ್ತೆ) ಎಂಬ 6 ನಿಲ್ದಾಣ ಒಳಗೊಂಡ 7 ಕಿ.ಮೀ ಮಾರ್ಗವನ್ನು ಆರಂಭಿಸುವ ಗುರಿಯನ್ನು ಬಿಎಂಆರ್ಸಿಎಲ್ ಹೊಂದಿತ್ತು. ಆದರೆ, ನಿಲ್ದಾಣಗಳ ಕಾಮಗಾರಿ ಬಾಕಿ ಇದ್ದ ಹಿನ್ನೆಲೆ 2026 ಮೇಗೆ ಗಡುವು ಹಾಕಿಕೊಂಡಿದೆ.
ಜಯದೇವ ಆಸ್ಪತ್ರೆ ಹಾಗೂ ಎಂಜಿ ರಸ್ತೆ ಒಟ್ಟು 3 ಇಂಟರ್ಚೇಂಜ್ ನಿಲ್ದಾಣವು ಗುಲಾಬಿ ಮಾರ್ಗದಲ್ಲಿ ಬರುತ್ತದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಆರ್.ವಿ. ರಸ್ತೆ – ಬೊಮ್ಮಸಂದ್ರದ ಹಳದಿ ಮಾರ್ಗದೊಂದಿಗೆ ಈ ಮಾರ್ಗ ಸಂಪರ್ಕಿಸುತ್ತದೆ. ಎಂಜಿ ರಸ್ತೆ ನಿಲ್ದಾಣದಲ್ಲಿ ಚಲ್ಲಘಟ್ಟ – ವೈಟ್ಫೀಲ್ಡ್ ನಡುವಿನ ನೇರಳೆ ಮಾರ್ಗವನ್ನು ಸಂಪರ್ಕಿಸುತ್ತದೆ. ನಾಗವಾರ ನಿಲ್ದಾಣದಲ್ಲಿ ವಿಮಾನ ನಿಲ್ದಾಣ – ಸಿಲ್ಕಬೋರ್ಡ್ ನಡುವೆ ಆರಂಭವಾಗಲಿರುವ ನೀಲಿ ಮಾರ್ಗವನ್ನು ಸಂಪರ್ಕಿಸುತ್ತದೆ.
ಬಿಎಂಆರ್ಸಿಎಲ್ ಗುಲಾವಿ ಮತ್ತು ನೀಲಿ ಮಾರ್ಗಗಳಿಗಾಗಿ (ಹಂತ 2ಎ ಮತ್ತು 2ಬಿ) ಒಟ್ಟು 60 ರೈಲು ಸೆಟ್ಗಳನ್ನು ಖರೀದಿಸಲು ಬಿಇಎಂಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಬಿಇಎಂಎಲ್ನಿಂದ ಮೊದಲ ಮಾದರಿಯ ರೈಲು ನವೆಂಬರ್ ಅಂತ್ಯದ ವೇಳೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಎತ್ತರಿಸಿದ ಗುಲಾಬಿ ಮಾರ್ಗದ ಮುಖ್ಯ ಮಾರ್ಗದ ಪರೀಕ್ಷೆಗಳ ಜೊತೆಗೆ, ಕೊತ್ತನೂರು ಡಿಪೋದಲ್ಲಿ ಮಾದರಿ ರೈಲಿನ ಪರೀಕ್ಷೆ ನಡೆಸಲಾಗುತ್ತದೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿವೆ. ನಾಗವಾರ, ಕಾಡುಗುಂಡನಹಳ್ಳಿ, ವೆಂಕಟೇಶಪುರ, ಟ್ಯಾನರಿ ರಸ್ತೆ, ಪಾಟರಿ ಟೌನ್, ಬೆಂಗಳೂರು ದಂಡು (ಕಂಟೋನ್ಮೆಂಟ್) ರೈಲ್ವೆ ನಿಲ್ದಾಣ, ಶಿವಾಜಿ ನಗರ, ಮಹಾತ್ಮಾ ಗಾಂಧಿ ರಸ್ತೆ, ರಾಷ್ಟ್ರೀಯ ಸೈನಿಕ ಶಾಲೆ, ಲ್ಯಾಂಗ್ಫೋರ್ಡ್ ಟೌನ್, ಲಕ್ಕಸಂದ್ರ, ಡೈರಿ ವೃತ್ತ, ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು, ಮತ್ತು ಕಾಳೇನ ಅಗ್ರಹಾರ.








