ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣನಿಂದ ಬಂತು ವಿಡೀಯೋ ಸಂದೇಶ…!

ಬೆಂಗಳೂರು :

   ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಕೆಲ ದಿನಗಳ ಹಿಂದೆ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ಸಹ ನಡೆಯಿತು. ಆ ದಿನ ರಾಜ್ಯದಾದ್ಯಂತ ಅಭಿಮಾನಿಗಳು ಶಿವಣ್ಣನ ಹೆಸರಲ್ಲಿ ವಿಶೇಷ ಪೂಜೆ, ಮೃತ್ಯುಂಜಯ ಹೋಮ, ಅನ್ನಸಂತರ್ಪಣೆಗಳನ್ನು ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಆ ಬಳಿಕ ಗೀತಾ ಶಿವರಾಜ್ ಕುಮಾರ್, ನಿವೇದಿತಾ ಅವರುಗಳು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಹೊಸ ವರ್ಷದಂದು ಸ್ವತಃ ಶಿವಣ್ಣ ಅಭಿಮಾನಿಗಳಿಗೆಂದು ವಿಡಿಯೋ ಮಾಡಿ ಹಂಚಿಕೊಂಡಿದ್ದು ತಮ್ಮ ಆರೋಗ್ಯದ ಬಗ್ಗೆ ಸ್ವತಃ ಮಾಹಿತಿ ನೀಡಿದ್ದಾರೆ.

   ವಿಡಿಯೋನಲ್ಲಿ ಮೊದಲು ಮಾತನಾಡಿರುವ ಗೀತಾ ಶಿವರಾಜ್ ಕುಮಾರ್ ಅವರು, ಶಿವರಾಜ್ ಕುಮಾರ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಎಲ್ಲ ವರದಿಗಳು ನೆಗೆಟಿವ್ ಬಂದಿದೆ. ಫೆತಾಲಜಿ ರಿಪೋರ್ಟ್​ ಬರುವವರೆಗೆ ಸ್ವಲ್ಪ ಆತಂಕ ಇತ್ತು, ಆದರೆ ಈಗ ಆ ವರದಿಯೂ ಬಂದಿದ್ದು ಎಲ್ಲವೂ ನೆಗೆಟಿವ್ ಆಗಿವೆ. ನೀವುಗಳು ಮಾಡಿರುವ ಪ್ರಾರ್ಥನೆ ತೋರಿದ ಪ್ರೀತಿ ಮತ್ತು ಬೆಂಬಲವನ್ನು ಜೀವನ ಇರುವವರೆಗೆ ಮರೆಯುವುದಿಲ್ಲ ಎಂದು ಭಾವುಕರಾಗಿ ನುಡಿದರು.

   ಬಳಿಕ ಮಾತನಾಡಿದ ಶಿವಣ್ಣ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಬಳಿಕ ಮಾತನಾಡಿ, ‘ಅನಾರೋಗ್ಯದ ನಡುವೆಯೇ ಯಾವುದೋ ಜೋಶ್​ನಲ್ಲಿ ಶೂಟಿಂಗ್​ನಲ್ಲಿ ಭಾಗವಹಿಸಿಬಿಟ್ಟೆ. ಎಲ್ಲರೂ ಜೊತೆಗೆ ಇದ್ದರು ಕೀಮೋ ಮಾಡಿಸುತ್ತಿರಬೇಕಾದರೆ ‘45’ ಸಿನಿಮಾದ ಫೈಟ್ ಸೀನ್​ನಲ್ಲಿ ಭಾಗವಹಿಸಿದ್ದೆ, ಅದರ ಶ್ರೇಯ ರವಿವರ್ಮಗೆ ಸಲ್ಲಬೇಕು. ಆದರೆ ಶಸ್ತ್ರಚಿಕಿತ್ಸೆ ದಿನ ಹತ್ತಿರ ಬಂದಂತೆ ತುಸು ಆತಂಕ ಇತ್ತು. ಆದರೆ ಅಭಿಮಾನಿಗಳು, ಗೆಳೆಯರು, ಸಹ ನಟರು, ಬಾಲ್ಯದ ಗೆಳೆಯರು ನೀಡಿದ ಬೆಂಬಲ ಧೈರ್ಯ ತುಂಬಿತು ಇಲ್ಲಿನ ವೈದ್ಯರು, ನರ್ಸ್​ಗಳು ಬಹಳ ಚೆನ್ನಾಗಿ ಕಾಳಜಿ ಮಾಡಿದರು’ ಎಂದರು. ಹಲವರ ಹೆಸರು ಹೇಳಿ ಧನ್ಯವಾದಗಳನ್ನು ಹೇಳಿದರು. ಪತ್ನಿ ಗೀತಾ ಬಗ್ಗೆ ನೀಡಿದ ಬೆಂಬಲವನ್ನು ವಿಶೇಷವಾಗಿ ಕೊಂಡಾಡಿದರು. 

   ಮುಂದವರೆದು ಮಾತನಾಡಿ, ‘ಕೆಲವರೆಲ್ಲ ಕಿಡ್ನಿ ಟ್ರಾನ್ಸ್​ಪ್ಲಾಂಟ್ ಎಂದೆಲ್ಲ ಅಂದುಕೊಂಡಿದ್ದಾರೆ ಅದು ಹಾಗೆ ಆಗಿಲ್ಲ. ಮೂತ್ರಕೋಶವನ್ನು ತೆಗೆದು ಹೊಸದಾಗಿ ಜೋಡಿಸಲಾಗಿದೆ ಅಷ್ಟೆ. ನಾವು ಇಷ್ಟು ದಿನ ಅದರ ಬಗ್ಗೆ ವಿವರವಾಗಿ ಹೇಳಿರಲಿಲ್ಲ, ವಿವರಗಳನ್ನು ಹೇಳಿದರೆ ಆತಂಕ ಪಡುತ್ತಾರೆ ಎಂಬ ಕಾರಣಕ್ಕೆ ಅದನ್ನು ಹೇಳಿರಲಿಲ್ಲ. ನೀವು ಇಲ್ಲಿವರೆಗೆ ನೀಡಿರುವ ಪ್ರೀತಿ, ಗೌರವಕ್ಕೆ ಸದಾ ಋಣಿ. ವೈದ್ಯರು ಹೇಳಿದ್ದಾರೆ ಮೊದಲ ಕೆಲ ತಿಂಗಳು ವಿಶ್ರಾಂತಿ ಪಡೆಯಿರಿ ಆ ನಂತರ ಬೇಕಾದರೆ ನೀವು ಮೊದಲಿನಂತೆ ಜೋಶ್​ನಲ್ಲಿ ಮುನ್ನುಗ್ಗಿ ಎಂದಿದ್ದಾರೆ. ನಾನು ಅಷ್ಟೆ ಮೊದಲಿಗಿಂತಲೂ ಹೆಚ್ಚಿನ ಜೋಶ್​ನಲ್ಲಿ ವಾಪಸ್ ಬರ್ತೀನಿ, ಡ್ಯಾನ್ಸ್, ಫೈಟ್ ಮೂಲಕ ನಿಮ್ಮನ್ನು ರಂಜಿಸುತ್ತೀನಿ, ನಾನು ಹೊಸ ವರ್ಷದಲ್ಲಿ ಹೊಸದಾಗಿ ಬರಲು ಕಾಯುತ್ತಿದ್ದೀನಿ’ ಎಂದಿದ್ದಾರೆ ಶಿವರಾಜ್ ಕುಮಾರ್.

 

Recent Articles

spot_img

Related Stories

Share via
Copy link