ನ್ಯಾಯಾಲಯದಲ್ಲಿ ಕ್ಷಮೆ ಕೇಳಿದ ಶೋಭಾ ಕರಂದ್ಲಾಜೆ…..!

ಬೆಂಗಳೂರು

    ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಉಗ್ರ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ತಮಿಳುನಾಡು ಸರ್ಕಾರ ಸೇರಿದಂತೆ ಅಲ್ಲಿನ ಜನಪ್ರತಿನಿಧಿಗಳು ಕಿಡಿಕಾರಿದ್ದರು. ಇದೀಗ ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ ತಮಿಳುನಾಡಿನ ಜನರ ಕ್ಷಮೆಯಾಚಿಸಿದ್ದಾರೆ.

  ಈ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ಸೆಪ್ಟೆಂಬರ್​ 3 ರಂದು ನಡೆಯಿತು. ಶೋಭಾ ಪರ ವಾದ ಮಂಡಿಸಿದ ವಕೀಲರು, ಸಚಿವರ ಹೇಳಿಕೆಗೆ ಸಂಬಂಧಿಸಿ ತಮಿಳುನಾಡು ಜನರ ಕ್ಷಮೆಯಾಚಿಸುವುದಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ತಮಿಳುನಾಡಿನ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರದಿಂದ ಸೂಕ್ತ ಸೂಚನೆ ಪಡೆದ ನಂತರ ತಿಳಿಸುವೆ ಎಂದು ಹೇಳಿದ್ದಾರೆ. ತಮಿಳುನಾಡಿನ ಇತಿಹಾಸ, ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಜನರ ಬಗ್ಗೆ ನನಗೆ ಹೆಚ್ಚಿನ ಗೌರವ ಇದೆ. ತಮಿಳುನಾಡಿನ ಜನರ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶ ನನ್ನದಾಗಿರಲಿಲ್ಲ. ಆದ್ದರಿಂದ, ನನ್ನ ಹೇಳಿಕೆಯಿಂದ ಯಾವುದೇ ನೋವನ್ನು ಉಂಟು ಮಾಡಿದ್ದಕ್ಕಾಗಿ ನಾನು ಮತ್ತೊಮ್ಮೆ ತಮಿಳುನಾಡಿನ ಜನತೆಗೆ ಕ್ಷಮೆಯಾಚಿಸುತ್ತೇನೆ. ನ್ಯಾಯದ ಹಿತಾಸಕ್ತಿಯಿಂದ ಈ ಹೇಳಿಕೆ ನೀಡಿದ್ದೇನೆ, ಹಾಗಂತ ಉದ್ದೇಶಿತವಲ್ಲ ಎಂದು ಹೇಳಿದ್ದಾರೆ.

   ಮಾರ್ಚ್ 1ರಂದು ಬೆಂಗಳೂರಿನ ಜನಪ್ರಿಯ ಉಪಾಹಾರ ಗೃಹವಾದ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಆಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಾಂಬ್ ಸ್ಫೋಟದೊಂದಿಗೆ ತಮಿಳುನಾಡನ್ನು ತಳುಕು ಹಾಕಿದ್ದರು. ಈ ಸಂಬಂಧ ಮದುರೈ ಪೊಲೀಸರು ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ, ಶೋಭಾ ಕರಂದ್ಲಾಜೆ ಅವರು, ತಮ್ಮ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಕೈಬಿಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

   ನ್ಯಾ. ಜಿ. ಜಯಚಂದ್ರನ್ ನೇತೃತ್ವದ ನ್ಯಾಯಪೀಠದೆದುರು ಪ್ರಮಾಣ ಪತ್ರ ಸಲ್ಲಿಸಿರುವ ಶೋಭಾ ಕರಂದ್ಲಾಜೆ, ನಾನು ತಮಿಳುನಾಡು ಜನರ ಕುರಿತು ನೀಡಿದ್ದ ಹೇಳಿಕೆಯಲ್ಲಿ ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶವಿರಲಿಲ್ಲ. ನಾನು ಈಗಾಗಲೇ ನನ್ನ ಹೇಳಿಕೆಯನ್ನು ಹಿಂಪಡೆದಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈಗಾಗಲೇ ಕ್ಷಮಾಪಣೆ ಕೋರಿದ್ದೇನೆ ಎಂದೂ ಪ್ರಮಾಣ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ಇನ್ನು ಕೋರ್ಟ್​ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.

Recent Articles

spot_img

Related Stories

Share via
Copy link
Powered by Social Snap